ಮಂಗಳವಾರ, ಸೆಪ್ಟೆಂಬರ್ 30, 2008



ತ್ಯಾಜ್ಯ ನಿರ್ವಹಣೆ: ಯಾರು ಹೊಣೆ?


1976ರಲ್ಲಿ ನಡೆದ ಘಟನೆ. ಅಮೆರಿಕಾದ ನಯಾಗರ ನಗರದ ಶಾಲೆಯೊಂದರ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾಗತೊಡಗಿದರು. ವಿಚಿತ್ರ ಲಕ್ಷಣಗಳುಳ್ಳ ರೋಗಕ್ಕೆ ಅಸಂಖ್ಯಾತ ಮಕ್ಕಳು ತುತ್ತಾದರು. ಕೆಲವರು ಮೃತಪಟ್ಟರು. ಶಾಲೆಯ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ 200ಕ್ಕೂ ಹೆಚ್ಚು ಕುಟುಂಬಗಳು ಕ್ಯಾನ್ಸರ್‌ಗೆ ತುತ್ತಾದರು. ಹುಟ್ಟುವ ಮಕ್ಕಳು ಗರ್ಭದಲ್ಲೇ ಸತ್ತವು, ಅಂಗವಿಕಲರಾಗಿ ಹುಟ್ಟಿದವು. ಕಾರಣ ಹುಡುಕುತ್ತಾ ಹೊರಟಾಗ ಬಹಿರಂಗಗೊಂಡ ವಿಷಯಕ್ಕೆ ಅಮೆರಿಕಾ ಮಾತ್ರವಲ್ಲ, ಇಡೀ ಜಗತ್ತು ನಡುಗಿತು.
ಕಾರಣವಿಷ್ಟೆ. ಆ ಜಾಗ ಹೂಕರ್‌ ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಕಂಪನಿಯ `ತಿಪ್ಪೆಗುಂಡಿ’ಯಾಗಿತ್ತು.
ಹೂಕರ್‌ ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಕಂಪನಿ ಆ ಜಾಗವನ್ನು ಹಿಂದೆ ತನ್ನ ತ್ಯಾಜ್ಯ ವಿಲೇವಾರಿಗಾಗಿ ಪಡೆದಿತ್ತು. ಹತ್ತು ವರ್ಷಗಳ ನಂತರ ಜಾಗವನ್ನು ಮಾರಾಟ ಮಾಡಿತ್ತು. ಅದೇ ಜಾಗದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು.
ಆಗಬಾರದ್ದು ಆಗಿ ಹೋದ ನಂತರ ಆ ಜಾಗ `ಶುದ್ಧ’ಗೊಳಿಸಲು ಅಮೆರಿಕಾ 100 ಮಿಲಿಯನ್‌ ಡಾಲರ್‌ ಹಣ ವೆಚ್ಚ ಮಾಡಿತು. ಸೌಂದರ್ಯ ನಗರ ಎಂದೇ ಹೆಸರಾಗಿದ್ದ ನಯಾಗರದಲ್ಲಿ ನಡೆದ ಈ ಘಟನೆಯಿಂದ ವೈಟ್‌ಹೌಸ್‌ ನಾಯಕರು ಇರುಸು ಮರುಸಿಗೆ ಒಳಗಾಗಬೇಕಾಯಿತು.
ಈ ಘಟನೆಯ ನಂತರ ವಿಷಯುಕ್ತ ತ್ಯಾಜ್ಯದ ಅಪಾಯದ ಅರಿವು ಜಗತ್ತಿಗೆ ಆಯಿತು. `ವಿಶ್ವ ಪರಿಸರ ವಿಷಯ’ದಲ್ಲಿ ಇದು ಮರೆಯಲಾಗದ ಪ್ರಕರಣವಾಗಿದೆ.
ತ್ಯಾಜ್ಯ ವಿಲೇವಾರಿ ಒಂದು ಜಾಗತಿಕ ಸಮಸ್ಯೆ. ಪಾಶ್ಚಿಮಾತ್ಯ ರಾಷ್ಟ್ರಗಳು ತ್ಯಾಜ್ಯ ನಿರ್ವಹಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು ತಮ್ಮ ಡಸ್ಟ್‌ಬಿನ್‌ಗಳೆಂದು ಭಾವಿಸಿರುವುದು ದುರದೃಷ್ಟಕರ. ತಮ್ಮ ರಾಷ್ಟ್ರದ ಅಪಾಯಕಾರಿ ತ್ಯಾಜ್ಯವನ್ನು ಹಡಗುಗಳ ಮೂಲಕ ಸಾಗಿಸಿ ಬಡರಾಷ್ಟ್ರಗಲ್ಲಿ ಚೆಲ್ಲುತ್ತಿವೆ.
1986ರಿಂದ 1988ರ ನಡುವೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೃತೀಯ ಜಗತ್ತಿನ ಬಡ ರಾಷ್ಟ್ರಗಳಿಗೆ 3.656 ಮಿಲಿಯನ್‌ ಟನ್‌ ಅಪಾಯಕಾರಿ ತ್ಯಾಜ್ಯವನ್ನು ಸಾಗಿಸಿವೆ. ಈ ವಿಷಯವನ್ನು ಕೋಲ್ಕತ್ತಾದ ಅಮೃತ ಬಜಾರ್‌ ಪತ್ರಿಕಾ 1989 ನವೆಂಬರ್‌ 25ರಂದು ಪ್ರಕಟಿಸಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಧೋರಣೆ ಬಗ್ಗೆ ಭಾರತದಲ್ಲಿ ಪ್ರಬಲ ವಿರೋಧ ವ್ಯಕ್ತವಾಯಿತು. ಈ ಕುರಿತು ರಾಷ್ಟ್ರಗಳ ನಡುವೆ ಒಡಂಬಡಿಕೆಯಾಗಿತ್ತು ಎಂಬ ವಿಷಯ ಅನಂತರ ಹೊರಬಿತ್ತು.
ಒಸಾಮಾ ಬಿನ್‌ ಲಾಡೆನ್‌ ನೇತೃತ್ವದ ಅಲ್‌ಕೈದಾ ಸಂಘಟನೆಯ ಉಗ್ರಗಾಮಿಗಳು ಕೆಡವಿದ ವಿಶ್ವ ವಾಣಿಜ್ಯ ಕಟ್ಟಡದ ತ್ಯಾಜ್ಯವನ್ನು ಅಮೆರಿಕಾ ಭಾರತಕ್ಕೆ ತಂದು ಸುರಿಯಿತು. ಅಮೆರಿಕಾದ ದೊಡ್ಡಣ್ಣನ ನೀತಿಯ ವಿರುದ್ಧ ಭಾರತೀಯರು ತಿರುಗಿ ಬೀಳಲಿಲ್ಲ.
ಕೆಲರಾಷ್ಟ್ರಗಳು ತಮ್ಮ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯುತ್ತಾ ಬಂದಿವೆ. ಇದು ಸಾಗರ ಜೀವಿಗಳ ಜೀವಕ್ಕೆ ಕುತ್ತಾಗುತ್ತಿದೆ. ಆಗಾಗ ಸಮುದ್ರದಲ್ಲಿ ಲಕ್ಷಾಂತರ ಮೀನುಗಳು ಸಾಯುವುದಕ್ಕೆ ಅಪಾಯಕಾರಿ ತ್ಯಾಜ್ಯವೇ ಕಾರಣ.
ಆಫ್ರಿಕಾ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತ್ಯಾಜ್ಯ ವಿಲೇವಾರಿ ಕ್ರಮವನ್ನು ಬಲವಾಗಿ ವಿರೋಧಿಸಿವೆ. ಕೀನ್ಯಾದ ಮಾಜಿ ಅಧ್ಯಕ್ಷ ಡ್ಯಾನಿಯಲ್‌ ಅರಪ್‌ ಮೊಯಿ ಇದನ್ನು `ವಿಷಬೀಜ ಭಯೋತ್ಪಾದನೆ’ ಎಂದು ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ `ಬೆಸಲ್‌ ಮಾತುಕತೆ’ ಪ್ರಮುಖವಾದುದು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಸರ ಕಾರ್ಯಕ್ರಮದಿಂದ (UNEP) 1989ರಲ್ಲಿ ರೂಪಿಸಲಾಯಿತು. ಈ ಮಾತುಕತೆಯಲ್ಲಿ 150ಕ್ಕೂ ಹೆಚ್ಚುರಾಷ್ಟ್ರಗಳು ಭಾಗವಹಿಸಿದ್ದವು. ತ್ಯಾಜ್ಯ ವಿಲೇವಾರಿ ಕ್ರಮವನ್ನೊಳಗೊಂಡ ಒಂದು ಕರಡನ್ನು ಈ ಸಭೆಯಲ್ಲಿ ಅಂಗೀಕರಿಸಲಾಯಿತು.
ತ್ಯಾಜ್ಯದ ವಿಷಯದಲ್ಲಿ ಭಾರತದ ಸ್ಥಿತಿ ಭಯಂಕರವಾಗಿದೆ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತಿಪ್ಪೆಗುಂಡಿ ಸಮಸ್ಯೆಯೂ ಒಂದು! ಹಲವು ಕಾನೂನುಗಳಿದ್ದರೂ ತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿದೆ. ಪರಿಸರ (ಸಂರಕ್ಷಣೆ) ಕಾನೂನು- 1986ರ ಹಲವು ಸೆಕ್ಷನ್‌ಗಳಲ್ಲಿ ತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ಉಲ್ಲೇಖಿಸಲಾಗಿದೆ. ತ್ಯಾಜ್ಯ ನಿರ್ವಹಣಾ ನಿಯಮಗಳು- 1989 ಇದರಲ್ಲಿ ಹಲವು ಕ್ರಮವಿಧಾನಗಳನ್ನು ನೀಡಲಾಗಿದೆ. ಈ ಕಾನೂನುಗಳಿರುವುದು ಬಹು ಸಂಖ್ಯಾತ ಭಾರತೀಯರಿಗೆ ಗೊತ್ತಿಲ್ಲ. ಡಸ್ಟ್‌ಬಿನ್‌ ಲಾ ಯಾರಿಗೆ ಬೇಕು?!
ರಾಷ್ಟ್ರದ ಮಲಿನ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇಲ್ಲಿ ಪ್ರತಿನಿತ್ಯ 2500 ಟನ್‌ ವಿಷಯುಕ್ತ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ೃಹತ್‌ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಕ್ರಮದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತಿವೆ. ಈ ತ್ಯಾಜ್ಯ ಬಹಳ ಅಪಾಯಕಾರಿಯಾಗಿದ್ದು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಲೇವಾರಿಗೆ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವ ಕಾರಣ ಗಾಳಿ, ಜಲ, ಅಂತರ್ಜಲ ಮಲಿನಗೊಳ್ಳುತ್ತಿವೆ.
ಬರೀ ಬೆಂಗಳೂರು ಮಾತ್ರವಲ್ಲ. ಎಲ್ಲಾ ಮೆಟ್ರೋಪಾಲಿಟನ್‌ ನಗರಗಳ ಹಣೆಬರಹವೂ ಇದೇ. ನವದೆಹಲಿಯಲ್ಲಿ ದಿನಕ್ಕೆ 4000 ಟನ್‌ ತ್ಯಾಜ್ಯ ಉತ್ಪತ್ತಿಯಾದರೆ ಮುಂಬೈ ನಗರದಲ್ಲಿ 4500 ಟನ್‌ ಉತ್ಪತ್ತಿಯಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಎಲ್ಲಾ ರಾಜ್ಯಗಳಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಇವು ಮಾಲಿನ್ಯದ ಮಟ್ಟವನ್ನು ಅಳೆದು ಸುರಿದು ಅಂಕಿ ಅಂಶ ನೀಡುತ್ತವೆ. ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಾವಳಿಗಳನ್ನು ಜಾರಿ ಮಾಡಿವೆ. ಆದರೆ ಎಲ್ಲಾ ನಿಯಮಗಳು ಕಡತದಲ್ಲಿ ಭದ್ರವಾಗಿವೆ. ಭಾರತ ತ್ಯಾಜ್ಯ ವಿಲೇವಾರಿಯಲ್ಲಿ ಸಂಪೂರ್ಣವಾಗಿ ಸೋತಿದೆ.
ವ್ಯರ್ಥ ತ್ಯಾಜ್ಯಗಳು ಮೂರು ರೀತಿಯಲ್ಲಿರುತ್ತವೆ. ದ್ರವ, ಘನ ಮತ್ತು ರೇಡಿಯೋ ವಿಕಿರಣ ತ್ಯಾಜ್ಯ. ಕೈಗಾರಿಕೆ ಹೊರಸೂಸುವ ವ್ಯರ್ಥ ವಸ್ತು, ಕ್ಲೋರೋಫ್ಲೋರೋ ಕಾರ್ಬನ್‌ (ಸಿಎಫ್‌ಸಿ) ಮುಂತಾದವು ದ್ರವತ್ಯಾಜ್ಯದಲ್ಲಿ ಸೇರುತ್ತವೆ. ಇದು ಬಹಳ ಬೇಗ ಗಾಳಿ, ನೀರಿನೊಡನೆ ಸೇರಿ ವಾತಾವರಣವನ್ನು ಹಾಳುಗೆಡವಬಲ್ಲದು. ದ್ರವತ್ಯಾಜ್ಯದ ಶುದ್ಧೀಕರಣ ಬಹಳ ಕಷ್ಟ. ಇದು ಸದಾ ವಾತಾವರಣದಲ್ಲಿ ಅಸ್ತಿತ್ವದಲ್ಲಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮಾನವ ಬಳಸಿ ಬಿಸಾಡಿದ ವಸ್ತುಗಳನ್ನು ಘನತ್ಯಾಜ್ಯ ಎನ್ನಬಹುದು. ಆಸ್ಪತ್ರೆ ತ್ಯಾಜ್ಯ, ಸತ್ತ ಪ್ರಾಣಿ ಪಕ್ಷಿ ಗಿಡಮರಗಳು ಮುಂತಾದವು ಘನ ತ್ಯಾಜ್ಯದಲ್ಲಿ ಸೇರುತ್ತವೆ. ವಿಲೇವಾರಿ ಕ್ರಮಗಳನ್ನು ಅನುಸರಿಸಿದರೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ನಾಗರಿಕ ಪರಮಾಣು ಶಕ್ತಿ ಉತ್ಪಾದನೆಯಲ್ಲಿ `ರೇಡಿಯೋ ವಿಕಿರಣ ತ್ಯಾಜ್ಯ’ ಹೊರಹೊಮ್ಮುತ್ತದೆ. ಈಗ ಎಲ್ಲಾ ರಾಷ್ಟ್ರಗಳು ನಾಗರಿಕ ಪರಮಾಣು ರಾಷ್ಟ್ರಗಳಾಗಿ ಮಾರ್ಪಡುತ್ತಿದ್ದು, ಪರಮಾಣು ಇಂಧನ ಶಕ್ತಿ ಘಟಕಗಳ ನಿರ್ಮಾಣದಲ್ಲಿ ತೊಡಗಿವೆ. ಪರಮಾಣು ಉತ್ಪಾದನೆಗೆ ಮುಖ್ಯವಾಗಿ ಬೇಕಾಗಿರುವುದು ಥೋರಿಯಂ. ಇದು ಬಹಳ ದುಬಾರಿ ಇಂಧನ ಮೂಲ. ಒಂದು ಕೆ.ಜಿ. ಥೋರಿಯಂ ಮೂರು ಸಾವಿರ ಟನ್‌ ಕಲ್ಲಿದ್ದಲಿಗೆ ಸಮ. ರೇಡಿಯೋ ವಿಕಿರಣ ತಾಜ್ಯ ಜೀವಮಂಡಲದ ಮೇಲೆ ಭೀಕರ ಪರಿಣಾಮ ಬೀರುತ್ತದೆ.
ವಾಯುಮಾಲಿನ್ಯದಲ್ಲಿ ಬೆಂಗಳೂರು ಹಲವು ವರ್ಷಗಳಿಂದ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಇಲ್ಲಿ ಪ್ರತಿ ತಿಂಗಳು 15000 ವಾಹನಗಳು ನೋಂದಾವಣೆಗೊಳ್ಳುತ್ತಿವೆ. ಬೆಂಗಳೂರಿನ ಗಾಳಿ ಮಲಿನವಾಗುವುದಕ್ಕೆ ವಾಹನಗಳೇ ಕಾರಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ.
ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಅಕ್ರಮವಾಗುತ್ತಿದೆ. ತ್ಯಾಜ್ಯ ಸಾಗಣೆದಾರರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳು ತಮ್ಮ ತಾಜ್ಯವನ್ನು ಬೆಂಗಳೂರಿನ ಹೊರವಲಯದ ಖಾಲಿ ಪ್ರದೇಶಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕ ಶರತ್‌ಚಂದ್ರ ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಮಾತ್ರ ಹೊಣೆಯಲ್ಲ. ಸಾರ್ವಜನಿಕರೂ ಹೊಣೆಗಾರರೇ. ತಮ್ಮ ಮನೆಯ ತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಕ್ರಮಗಳನ್ನು ಅನುಸರಿಸಿದರೆ ಅರ್ಧದಷ್ಟು ಸಮಸ್ಯೆಗೆ ಪರಿಹಾರ ದೊರೆಯುತ್ತದೆ.




ಅಪ್ಪಿಕೋ 25


1983, ಸೆಪ್ಟಂಬರ್‌ 8…..
ಕೊಡಲಿ ಪೆಟ್ಟಿಗೆ ಸಿಕ್ಕಿ ಬಲಿಯಾಗುತ್ತಿದ್ದ ಮರಗಳ ಉಳಿವಿಗಾಗಿ ಅಂದು ತೆಗೆದುಕೊಂಡ ಮಹತ್ವದ ನಿರ್ಧಾರ ಇಂದು ಐತಿಹಾಸಿಕ ದಿನ. ಮರವನ್ನು ಅಪ್ಪಿ `ಜೀವ ಬೇಕಾದರೂ ಬಿಟ್ಟೇವು ಮರವನ್ನು ಬಿಡೆವು’ ಎಂಬ ಘೋಷಣೆಯೊಂದಿಗೆ ನಡೆಸಿದ ಶಾಂತಿಯುತ ಚಳವಳಿಯೇ ಅಪ್ಪಿಕೋ ಚಳವಳಿ. ಈ ಚಳವಳಿಗೆ ಇಂದು 25 ವಸಂತಗಳು ತುಂಬಿವೆ. ಅದರ ನೆನೆಪು ಮಾತ್ರ ನಳನಳಿಸುವ ಹಸಿರು ಮರದಂತೆ ಇನ್ನೂ ಹಸಿರಾಗಿದೆ.
ಪರಿಸರ ಪ್ರೇಮಿ ಸುಂದರ ಲಾಲ್‌ ಬಹುಗುಣ ಅವರ ಮಾರ್ಗದರ್ಶನದೊಂದಿಗೆ ಮಲೆನಾಡು ಪ್ರದೇಶದಲ್ಲಿ ನಡೆದ ಈ ಆಂದೋಲನ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಿತು. ಅಷ್ಟೊತ್ತಿಗಾಗಲೇ ಹಿಮಾಲಯದಲ್ಲಿ ಚಿಪ್ಕೊ ಚಳವಳಿ ಯಶಸ್ವಿಯಾಗಿತ್ತು. ಶಿರಸಿ ಸಮೀಪದ ಕಳಾಸೆ, ಕುದ್ರಗೋಡು ದುರ್ಗಮ ಅರಣ್ಯ ಪ್ರದೇಶದಲ್ಲಿ ಗುತ್ತಿಗೆದಾರರು ಮರಗಳನ್ನು ಕಡಿಯಲು ಯತ್ನಿಸಿದಾಗ ನಡೆದ ಸಂಘಟಿತ ಹೋರಾಟವಿದು.
ಬಹುಗುಣ(ವಂತ) ಮುಟ್ಟಿದ್ದೆಲ್ಲಾ ಚಿನ್ನ. ಅವರ ಮಾರ್ಗದರ್ಶನದಲ್ಲಿ ಈಶಣ್ಣ, ಮಹಬಲೇಶ್ವರ ಹೆಗಡೆ, ಕೆ.ವಿ. ಸುಬ್ಬಣ್ಣ, ಆರ್‌.ವಿ. ಹೆಗಡೆ, ಎಸ್‌.ಎನ್‌. ಭಟ್ಟ, ಪಾಂಡುರಂಗ ಹೆಗಡೆ ಮುಂತಾದವರು ಅಪ್ಪಿಕೋ ಚಳವಳಿಯಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು.
ಆತ್ಮ ವಿಮರ್ಶಾ ವೇದಿಕೆ: ಈ ಚಳವಳಿಯ 25ನೇ ವರ್ಷಾಚರಣೆ ಬರೀ ಆಚರಣೆಯಲ್ಲ. ಆತ್ಮ ವಿಮರ್ಷೆಗೆ ಒಂದು ಅವಕಾಶ. ಇವತ್ತಿನ ಪರಿಸರ ಹೋರಾಟಗಳು ಯಾವ ಮಟ್ಟ ತಲುಪಿವೆ ಎಂಬುದನ್ನು ನಾವೆಲ್ಲರೂ ಯೋಚಿಸಬೇಕಿದೆ. ಅದೆಲ್ಲೋ ನಾಲ್ಕು ಗಿಡ ನೆಟ್ಟು ಪ್ರಚಾರ ಪಡೆದು, ಪರಿಸರ ಹೋರಾಟದ ಹೆಸರಿನಲ್ಲಿ ವಿದೇಶಿ ಹಣ ಸುಲಿಯುವ ನಮ್ಮ ಎನ್‌ಜಿಒಗಳ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ರೈತ ಹೋರಾಟಗಳು ದಿಕ್ಕುತಪ್ಪಿವೆ. ರೈತ ನಾಯಕರು ರಾಜಕಾರಣಿಗಳ ಚಮಚಾಗಳಾಗಿದ್ದಾರೆ. ಅಧಿಕಾರಕ್ಕೆ ಹಾತೊರೆಯುತ್ತಿದ್ದಾರೆ. ಸಂಘಟಿತ ಹೋರಾಟ ಮಾಯವಾಗಿದೆ. ರೈತರ ಬದುಕು ವಿಷಮಯವಾಗಿದೆ. ರೈತರಿಗೆ ವಿಶ್ವಾಸ ತುಂಬುವ ಒಬ್ಬನೇ ಒಬ್ಬ ನಾಯಕ ಇಲ್ಲ.
ಅಂದು ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣ ಒತ್ತೆ ಇಟ್ಟರು. ಇಂದು ತಮ್ಮ ಜೇಬು ತುಂಬಿಸಿಕೊಳ್ಳಲು ಪಂಚಭೂತಗಳಲ್ಲಿ ಒಂದಾದ ಭೂಮಿಯನ್ನೇ ಒತ್ತೆ ಇಟ್ಟಿದ್ದಾರೆ. ಇದು ನ್ಯಾಯವೆ..?




ಈ ಗಾಳಿ ವಿಷವಾಗಿದೆ!



ಬೆಂಗಳೂರಿನ ಅಸ್ತಮಾ, ಡಯಾಬಿಟಿಸ್‌ ರೋಗಿಗಳು ಆದಷ್ಟು ಬೇಗ ಊರು ಬಿಡುವುದು ಒಳಿತು! ಹೌದು, ಬೇರೆ ದಾರಿಯಿಲ್ಲ. ಬೆಂಗಳೂರಿನಲ್ಲಿ ಬೀಸುತ್ತಿರುವ ಗಾಳಿಯಲ್ಲಿ ಆಮ್ಲಜನಕ ಮಾಯವಾಗಿದೆ. ಅಸಂಖ್ಯಾತ ವಿಷಾನಿಲಗಳು ಬೆಂಗಳೂರನ್ನು ಆಳುತ್ತಿವೆ. ಇವು ಸಾವನ್ನು ಹೊತ್ತು ತರುವ ಅಲೆಗಳಾಗಿವೆ. ಈ ಅನಿಲಗಳನ್ನು ಸೇವಿಸುತ್ತಾ ಇಲ್ಲಿ ಬದುಕಿ ಆಯುಷ್ಯ ಕಳೆದುಕೊಳ್ಳುವುದಕ್ಕಿಂತ ಊರು ಬಿಡುವುದೇ ಸರಿಯಾದ ದಾರಿ.
ವಾಯುಮಾಲಿನ್ಯದಲ್ಲಿ ಬಹಳ ವರ್ಷಗಳಿಂದ ಬೆಂಗಳೂರು ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಪ್ರತಿದಿನ 15, 000 ವಾಹನಗಳು ನೋಂದಣಿಯಾಗುತ್ತಿವೆ. ಈ ವಾಹನಗಳು 3 ಲಕ್ಷ ಮೆಟ್ರಿಕ್‌ ಟನ್‌ ಡೀಸೆಲ್‌, 6 ಲಕ್ಷ ಮೆಟ್ರಿಕ್‌ ಟನ್‌ ಪೆಟ್ರೋಲ್‌ಲನ್ನು ಪ್ರತಿವರ್ಷ ದಹಿಸುತ್ತಿವೆ. ಇಷ್ಟೊಂದು ಇಂಧನ ಕುಡಿದ ವಾಹನಗಳು ಹೊರಸೂಸುವ ವಿಷಯುಕ್ತ ಅನಿಲದಿಂದ ಬೆಂಗಳೂರು ಮಂದಿಯ ಆರೋಗ್ಯ ಇಕ್ಕಟ್ಟಿಗೆ ಸಿಲುಕಿದೆ. `ಗಾರ್ಡನ್‌ ಸಿಟಿ’ಯಲ್ಲಿ ಪ್ರತಿವರ್ಷ 800 ಮಂದಿ ಗಂಟಲು ಕ್ಯಾನ್ಸರ್‌, ಅಸ್ತಮಾ ಇತ್ಯಾದಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಗಂಟಲು ಬೇನೆ, ಚರ್ಮ ರೋಗಗಳು ಬೆಂಗಳೂರಿಗರನ್ನು ಕಾಡುತ್ತಿವೆ. ಹಿರಿಯ ನಾಗರಿಕರ ಕಷ್ಟವನ್ನು ಹೇಳತೀರದು.
`ಚರ್ಮಕ್ಕೆ ಸಂಬಂಧಿಸಿದಂತಹ ಕೆಲ ಖಾಯಿಲೆ ಕೇಸುಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇವು ಎಷ್ಟು ವಿಚಿತ್ರವಾಗಿವೆ ಅಂದರೆ ಆ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಲು(ಡಯಾಗ್ನೈಸ್‌) ಸಾಧ್ಯವಿಲ್ಲ. ಡಯಾಗ್ನೈಸ್‌ ಮಾಡಲು ಆಗಲಿಲ್ಲ ಅಂದರೆ ಚಿಕಿತ್ಸೆ ನೀಡುವುದು ಹೇಗೆ? ಇದು ಬಹಳ ವಿಚಿತ್ರ.’ ಎನ್ನುತ್ತಾರೆ ಡಾ. ಶೈಲೇಂದ್ರ.
ಇಂಧನಗಳನ್ನು ದಹಿಸಿದಾಗ (ಫಾಸಿಲ್‌ ಪ್ಯೂಯಲ್‌) ಉತ್ಪತ್ತಿಯಾಗುವ ಅನಿಲ(ಕಾರ್ಬನ್‌ ಡೈ ಆಕ್ಸೈಡ್‌, ಕ್ಲೊರೋ ಪ್ಲೋರೋ ಕಾರ್ಬನ್‌) ಬಹಳ ವಿಷಯುಕ್ತವಾಗಿರುತ್ತವೆ. ನಮ್ಮ ಕಾರುಗಳಿಂದ ನೈಟ್ರೋಜನ್‌ ಉತ್ಪತ್ತಿಯಾಗುತ್ತದೆ. ನೈಟ್ರೋಜನ್‌ ಬಹಳ ಕೆಟ್ಟ ಅನಿಲ. ಬೆಂಗಳೂರಿನಲ್ಲಿ ಅದೆಷ್ಟು ಇಂಧನ ಉತ್ಪತ್ತಿಯಾಗುತ್ತಿವೆ ಅಂದರೆ, ಲೆಕ್ಕಕ್ಕೆ ಸಿಗದಷ್ಟು!
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನಲ್ಲೇ ಇದೆ! ಬೆಂಗಳೂರಿನ ವಾಯುಮಾಲಿನ್ಯ ಈ ಮಂಡಳಿಗೆ ಬಿಸಿತುಪ್ಪವಾಗಿದೆ. ಏನೇ ಸರ್ಕಸ್‌ ಮಾಡಿದರೂ ವಾಯುಮಾಲಿನ್ಯದ ಪ್ರಥಮ ಸ್ಥಾನದಿಂದ ಬೆಂಗಳೂರನ್ನು ಕೆಳಗಿಳಿಸಲು ಸಾಧ್ಯವಾಗಿಲ್ಲ. ಮಾಯುಮಾಲಿನ್ಯ ತಪಾಸಣೆಗಾಗಿ ನಗರದ ಮೂರು ಕಡೆಗಳಲ್ಲಿ ಘಟಕಗಳನ್ನು ಹೊಂದಿದೆ. ಆದರೂ ನಗರದ ಗಾಳಿ ಪ್ರತಿನಿತ್ಯ ಹದಗೆಡುತ್ತಿದೆ. ಪ್ರತಿವರ್ಷ ವಾಯುಮಾಲಿನ್ಯದ ಅಂಕಿ ಅಂಶಗಳ ವರದಿಯನ್ನು ತಪ್ಪದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ದೆಹಲಿ)ಗೆ ಸಲ್ಲಿಸುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ `ಟಾಸ್ಕ್‌ ಪೋರ್ಸ್‌’ವೊಂದನ್ನು 2001ರಲ್ಲಿ ರಚಿಸಲಾಗಿದೆ. ಇದರಲ್ಲಿ ಆರು ಮಂದಿ ಉನ್ನತ ಅಧಿಕಾರಿಗಳಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇದರ ಅಧ್ಯಕ್ಷರು. ಪೊಲೀಸ್‌, ಅರಣ್ಯ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಇದರಲ್ಲಿದ್ದಾರೆ. ಬೆಂಗಳೂರಿನ ವಾಯುಸ್ಥಿತಿ ಬಗ್ಗೆ ಮಾತನಾಡಲು ಇವರಿಗ ಬಾಯಿಲ್ಲ!
ಬೆಂಗಳೂರು ಬೆಳೆಯುತ್ತಿದೆ! ಇದೊಂದೇ ಎಲ್ಲಾ ಸಮಸ್ಯೆಗಳ ಮೂಲ. ಕಳೆದ ಐದು ವರ್ಷಗಳಿಂದ ಬೆಂಗಳೂರು 20 ವರ್ಷಗಳಲ್ಲಿ ಬೆಳೆದಷ್ಟು ಬೆಳದಿದೆ. ಭಾರತದ ಭವಿಷ್ಯದ ನಗರ ಎಂದೇ ಈ ನಗರವನ್ನು ಬಣ್ಣಸಲಾಗುತ್ತಿದೆ. ಬೆಂಗಳೂರಿನ ಕೆರೆಗಳು ಒತ್ತುವರಿಯಾಗುತ್ತಿವೆ. ಬೆಂಗಳೂರು ಬೆಂಗಾಡಾಗುತ್ತಿದೆ.
ಗ್ರೀನ್‌ಟಾಕ್ಸ್‌: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ(ವಿಧಾನ ಸೌಧ ವಲಯ) ಗ್ರೀನ್‌ ಟ್ಯಾಕ್ಸ್‌ ವಾಹನ ಬಳಕೆದಾರರ ಮೇಲೆ ಗ್ರೀನ್‌ ಟ್ಯಾಕ್ಸ್‌ ವಿಧಿಸಲು ಒಂದು ಕರಡನ್ನು ಸಿದ್ಧಪಡಿಸಿದೆ. ಅದನ್ನು ಮಂಡಳಿಯ ಅಧ್ಯಕ್ಷ ಡಾ. ಶರತ್‌ಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಲಸ ಮಾಡುವ ನೂರಾರು ಎನ್‌ಜಿಒಗಳಿವೆ. ಅಸಂಖ್ಯಾತ ಪರಿಸರ ತಜ್ಞರಿದ್ದಾರೆ. ಪರಿಸರದ ಮೇಲೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಕರೆದುಕೊಂಡು ಬಂದು ಉಪನ್ಯಾಸ ಕೊಡಿಸುತ್ತಾರೆ. ತಿಂಗಳಿಗೊಂದು ಫಾರಿನ್‌ ಟೂರ್‌ ಮಾಡುತ್ತಾರೆ. ವಿದೇಶಿ ಹಣ ಹರಿದು ಬರುತ್ತದೆ. ಮಾತೆತ್ತಿದರೆ ಯುಎನ್‌ಇಪಿ(ಅಮೆರಿಕಾದ ಪರಿಸರ ಕಾರ್ಯಕ್ರಮ), ಡಬ್ಲ್ಯುಟಿಒ, ಡಬ್ಲ್ಯುಎಚ್‌ಒಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ಥಳೀಯ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲ.
ನ್ಯಾನೋ ಕಾರು ಬರುತ್ತಿದೆ. ಬೆಂಗಳೂರಿನ ಮಂದಿ ಮುಗಿಬಿದ್ದು ಬುಕ್‌ ಮಾಡುತ್ತಿದ್ದಾರೆ. ದ್ವಿಚಕ್ರ ವಾಹಗಳ ಸಂಖ್ಯೆ ಕುಸಿಯುವ ನಿರೀಕ್ಷೆ ಇದೆ. ಬೆದರಿದ ದ್ವಿಚಕ್ರ ವಾಹನ ಕಂಪನಿಗಳು 10 ಸಾವಿರ ಬೆಲೆಯ ಬೈಕ್‌ ಸಿದ್ಧಪಡಿಸಲು ಚಿಂತಿಸಿವೆ. ಒಟ್ಟಿನಲ್ಲಿ ಈ ನಗರ ನರಕವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ಮುಂದಿನ ಮರ ಮನೆ ಮಾಲಿ­ಕ­ನಿಗೆ ಕಿರಿ­ಕಿರಿ. ಏನಾ­ದರೂ ಮಾಡಿ ಆ ಜಾಗ­ದಲ್ಲಿ ಮರವೇ ಇರ­ಲಿಲ್ಲ ಎನ್ನುವ ರೀತಿ ಮಾಡ­ಬೇಕು. ಕಡಿದು ಬೀಳಿ­ಸುವ ಹಾಗಿಲ್ಲ, ಅದು ಅಕ್ರಮ! ಮರದ ಕಾಟ­ದಿಂದ ತಪ್ಪಿ­ಸಿ­ಕೊ­ಳ್ಳಲು ಒಂದು ಕೆಲಸ ಮಾಡ­ಬ­ಹುದು. ಯಾರಿಗೂ ತಿಳಿ­ಯದ ಹಾಗೆ ಮರಕ್ಕೆ ವಿಷ ಉಣಿಸಿ ಕೊಲ್ಲು­ವುದು! ಅಲ್ಲಿಗೆ ಮರದ ಕಿರಿ­ಕಿ­ರಿ­ಯಿಂದ ಬಚಾವ್‌. ಕಾಂಪೌಂ­ಡ್‌ಗೆ ಸ್ವಲ್ಪ ಜಾಸ್ತಿ ಜಾಗ ಸಿಕ್ಕಿದ ಹಾಗಾ­ಯಿತು.
ಇದು ತಮಾ­ಷೆ­ಯಲ್ಲ. ಇದು ಬೆಂಗ­ಳೂ­ರಿ­ನಲ್ಲಿ ನಡೆ­ಯು­ತ್ತಿ­ರುವ ಸತ್ಯ ಸಂಗತಿ. ಒಂದು­ಕಡೆ ರಸ್ತೆ ಅಗ­ಲೀ­ಕ­ರ­ಣದ ಹೆಸ­ರಲ್ಲಿ ಬಿಬಿ­ಎಂಪಿ ಮರ­ಗ­ಳನ್ನು ನೆಲ­ಕ್ಕು­ರು­ಳಿ­ಸು­ತ್ತಿದೆ. ಇನ್ನೊಂದು ಕಡೆ ಮೆಟ್ರೋ ರೈಲಿಗೆ ಮರ­ಗ­ಳನ್ನು ಬಲಿ­ಕೊ­ಡ­ಲಾ­ಗು­ತ್ತಿದೆ. ಇದು ಎಲ್ಲ­ರಿಗೂ ಗೊತ್ತಿ­ರುವ ಸುದ್ದಿ. ಆದರೆ ಯಾರಿಗೂ ಗೊತ್ತಿ­ರದ ಇನ್ನೊಂದು ಸುದ್ದಿಯೇ `ಮ­ರ­ಗ­ಳಿಗೆ ವಿಷ ಉಣಿಸಿ ಕೊಲೆ.’
ಇತ್ತಿ­ಚೆಗೆ ಮಲ್ಲೇ­ಶ್ವರಂ ಬಡಾ­ವ­ಣೆಯ 15ನೇ ಕ್ರಾಸ್‌­ನಲ್ಲಿ ಮರ­ಬಿದ್ದು ಮಹಿ­ಳೆ­ಯೊ­ಬ್ಬರು ಮೃತ­ಪ­ಟ್ಟರು. ಮಳೆ ಗಾಳಿ ಏನೂ ಇರ­ಲಿಲ್ಲ. ಇದ್ದ­ಕ್ಕಿ­ದ್ದಂತೆ ಬಿದ್ದ ಮರದ ಬುಡ­ವನ್ನು ಪರಿ­ಶೀ­ಲಿ­ಸಿ­ದಾಗ ಬಹಿ­ರಂ­ಗ­ಗೊಂಡ ಸುದ್ದಿಯೇ ಮರ­ಗ­ಳಿಗೆ ವಿಷ­ಪ್ರಾ­ಷನ! ಯಾರೋ ಕಿಡಿ­ಗೇ­ಡಿ­ಗಳು ಮರದ ಬುಡಕ್ಕೆ ಮರ್ಕ್ಯುರಿ ಮಿಶ್ರ­ಣ­ವನ್ನು ಸುರಿದು, ಅದರ ಬೇರು­ಗಳು ಸುಟ್ಟು­ಹೋ­ಗು­ವಂತೆ ಮಾಡಿ­ದ್ದರು. ಅವರು ಬುದ್ದಿ­ವಂತ ಕಿಡಿ­ಗೇ­ಡಿ­ಗಳು. ಬುಡದ ಸುತ್ತಲೂ ಸಗಣಿ ಹಾಕಿದ್ದ ಕಾರಣ ವಿಷ ಬುಡ­ದಲ್ಲಿ ಇರು­ವುದು ಯಾರಿಗೂ ತಿಳಿ­ಯ­ಲಿಲ್ಲ.
ಕಾರ­ಣ­ಗಳು ಏನು ಗೊತ್ತೆ?: ಬಹಳ ಕ್ಷುಲ್ಲ­ಕ­ವಾ­ಗಿವೆ. ವಾಸ್ತು ಹೆಸ­ರಿ­ನಲ್ಲಿ ಮರ­ವನ್ನು ಕೊಲ್ಲ­ಲಾ­ಗು­ತ್ತಿದೆ. ಈ ಜೋತಿ­ಷಿ­ಗ­ಳಿಗೂ ಬುದ್ಧಿ ಇಲ್ಲ. ವಾಸ್ತು ದೋಷ­ವಿ­ದ್ದರೆ `ಮನೆ ಬಿಡಿ’ ಎಂದು ಸಲಹೆ ಮಾಡಲಿ. ಅದು ಬಿಟ್ಟು ಮರ ಕಡಿ­ಯಿರಿ ಅಂತ ಯಾಕೆ ಮಾಡ­ಬೇಕು? ಮರದ ಬೇರು­ಗಳು ಮನೆಯ ಕಾಂಪೌಂ­ಡಿನ ಗೋಡೆ­ಯನ್ನು ಹಾಳು­ಗೆ­ಡ­ವು­ತ್ತವೆ ಎಂದೂ ಕೂಡ ಮರಕ್ಕೆ ವಿಷ ಉಣಿ­ಸ­ಲಾ­ಗು­ತ್ತಿದೆ.
ಸೌದೆ­ಗಾಗಿ ಮರದ ಕೊಲೆ: ಇಟ್ಟಿಗೆ ಸುಡು­ವ­ವರು ಬದು­ಕಿ­ರುವ ಮರ­ಗ­ಳನ್ನು ಕೆಡವಿ ಒಣ­ಗಿಸಿ ಸೌದೆ ಮಾಡಿ­ಕೊ­ಳ್ಳು­ತ್ತಾರೆ. ಬರೀ ಇಟ್ಟಿಗೆ ಸುಡು­ವ­ವರು ಮಾತ್ರ­ವಲ್ಲ ದಿನ­ಬ­ಳ­ಕೆಗೆ ಸೌದೆ­ಯನ್ನು ಬೆಳೆ­ಸು­ವ­ವರು ಕೂಡ ಸಣ್ಣ ಪುಟ್ಟ ಮರ­ಗ­ಳನ್ನು ಕಡಿದು ಸೌದೆಗೆ ಬಳ­ಸು­ತ್ತಾರೆ. ಗ್ರಾಮೀಣ ಭಾಗ­ದಲ್ಲಿ ಸೌದೆ­ಯಿಂದ ಅಡುಗೆ ಮಾಡು­ವ­ವರು ಈ ಕೃತ್ಯ­ವನ್ನು ಹೆಚ್ಚು ಮಾಡು­ತ್ತಾರೆ.
ಭಾರ­ತೀಯ ಅರಣ್ಯ ಕಾನೂ­ನಿನ ಪ್ರಕಾರ ಈ ಎಲ್ಲಾ ಕೃತ್ಯ­ಗಳು ಅಕ್ರಮ. ಅರಣ್ಯ ಉತ್ಪ­ನ್ನ­ಗ­ಳಿಗೆ ಧಕ್ಕೆ ಮಾಡು­ವ­ವ­ರಿಗೆ ಶಿಕ್ಷಿ ವಿಧಿ­ಸುವ ಉಪ­ಬಂ­ಧ­ಗಳು ಈ ಕಾನೂ­ನಿ­ನಲ್ಲಿ ಇದೆ. ಆದರೆ ಬೆಂಗೂ­ಳೂ­ರಿನ ಯಾವೊಂದು ಪೊಲೀಸ್‌ ಠಾಣೆ­ಯಲ್ಲೂ ಮರಕ್ಕೆ ವಿಷ­ಪ್ರಾ­ಷ­ನಕ್ಕೆ ಸಂಬಂ­ಧಿ­ಸಿದ ಯಾವೊಂದು ಪ್ರಕ­ರ­ಣವೂ ದಾಖ­ಲಾ­ಗಿಲ್ಲ.
ಇಲಾ­ಖೆ­ಗ­ಳಿಗೆ ಬಾಯಿ ಇಲ್ಲ: ಅರಣ್ಯ ಇಲಾ­ಖೆಯ ಅಧಿ­ಕಾ­ರಿ­ಗ­ಳನ್ನು ಕೇಳಿ­ದರೆ ಈ ವಿಷಯ ಗೊತ್ತೇ ಇಲ್ಲಾ ಎಂಬಂತೆ ನಾಟಕ ಆಡು­ತ್ತಾರೆ. ಬೀಳುವ ಅಪಾ­ಯ­ವಿ­ರುವ ಕೆಲವು ಹಳೆಯ ಮರ­ಗ­ಳನ್ನು ಕಡಿ­ಯ­ಬೇಕು ನಿಜ. ಆದರೆ ಯಾರಿಗೂ ತಿಳಿ­ಯದ ಹಾಗೆ ಯಾವುದೋ ಅನಿ­ಲ­ವನ್ನು ಇಂಜೆಕ್ಟ್‌ ಮಾಡಿ ಕೆಡ­ವ­ಬೇ­ಕಿಲ್ಲ. ಮರ ಉರುಳಿ ಬಿದ್ದಾಗ ಮಾತ್ರ ಮರಕ್ಕೆ ವಿಷಾ­ನಿಲ ಇಂಜೆಕ್ಟ್‌ ಮಾಡ­ಲಾ­ಗಿದೆ ಎಂದು ತಿಳಿ­ಯು­ತ್ತದೆ. ಆದರೆ ಅದಕ್ಕೂ ಮುಂಚೆ ಮರ­ವನ್ನು ಟೆಸ್ಟ್‌ ಮಾಡಿ ಆ ರೀತಿ ಏನಾ­ದರೂ ಮಾಡ­ಲಾ­ಗಿ­ದೆಯೇ ಎಂಬು­ದನ್ನು ಪತ್ತೆ ಮಾಡುವ ಮಾನ­ದಂಡ ಅಧಿ­ಕಾ­ರಿ­ಗಳ ಬಳಿ ಇಲ್ಲ.
ತಪ್ಪಿ­ಸಿ­ಕೊ­ಳ್ಳು­ವುದು ಸುಲಭ: ಮರ ಹಸಿ­ರಾಗಿ ಆರೋ­ಗ್ಯ­ವಾ­ಗಿಯೇ ಇರು­ತ್ತದೆ. ಇದ್ದ­ಕ್ಕಿಂ­ದಂತೇ ಉರುಳಿ ಬಿದ್ದಾಗ ಯಾರ ಮೇಲೂ ಅನು­ಮಾನ ಪಡ­ಲಿ­ಕ್ಕಾ­ಗು­ವು­ದಿಲ್ಲ.ಗೆ­ದ್ದಲು ತಿಂದು ಸತ್ತಿ­ದ್ದಕ್ಕೆ ಯಾರೇನು ಮಾಡ­ಕ್ಕಾ­ಗುತ್ತೆ ಅಂತ ಸುಲ­ಭ­ವಾಗಿ ಅಪ­ರಾ­ಧಿ­ಗಳು ತಪ್ಪಿ­ಸಿ­ಕೊ­ಳ್ಳ­ಬ­ಹುದು.
ಯಾವ ಕಾರ­ಣ­ಕ್ಕಾಗಿ ಮರ ಉರುಳಿ ಬಿದ್ದಿತು, ನಿಜ­ವಾಗಿ ವಿಷ ಉಣಿಸಿ ಮರ­ವನ್ನು ಕೊಲ್ಲ­ಲಾ­ಯಿತೆ ಎಂದು ಪತ್ತೆ ಮಾಡುವ ಮಾನ­ದಂ­ಡದ ಅವ­ಶ್ಯ­ಕತೆ ಬೇಕಾ­ಗಿದೆ. ಇದ­ರಿಂದ ಅಪ­ರಾ­ಧಿ­ಗ­ಳನ್ನು ಪತ್ತೆ­ಮಾ­ಡ­ಬ­ಹುದು.
ಬೆಂಗ­ಳೂ­ರಿ­ನಲ್ಲಿ ಇಂಚು ಜಾಗಕ್ಕೂ ಚಿನ್ನ­ಕ್ಕಿಂತ ಜಾಸ್ತಿ ಬೆಲೆ. ಗೇಣುದ್ದ ಭೂಮಿ ಪುಕ್ಕಟ್ಟೆ ಸಿಗುತ್ತೆ ಅಂದ್ರೆ, ಮರ ಬೀಳಿ­ಸೋದು ಮಾತ್ರ­ವಲ್ಲ, ಮನು­ಷ್ಯರ ಪ್ರಾಣ ತೆಗೆ­ಯೋಕು ಸಿದ್ಧ­ವಿ­ರುವ ಮಂದಿ ಇದ್ದಾರೆ. ಇದೇ ರಿಯಲ್‌ ಎಸ್ಟೇಟ್‌ ಭೂಮ್‌! ಇವರು ಹೇಗಾ­ದರೂ ಕಿತ್ತಾ­ಡಿ­ಕೊಂಡು ಸಾಯಲಿ. ಆದರೆ ಅಮಾ­ಯಕ ಮರ­ಗಳ ಪ್ರಾಣ ತೆಗೆ­ಯೋದು ಯಾವ ನ್ಯಾಯ?


ಸ್ಕ್ಯಾಂಡಲ್‌ವುಡ್‌ಕತೆ


ಈಗ ನೀವೂ ಕೂಡ ಗಂಧ ಬೆಳೆಯಬಹುದು!
ಆಶ್ಚರ್ಯ ಪಡಬೇಕಾಗಿಲ್ಲ. ಇದು ಹೊಸ ಕಾನೂನಲ್ಲ. ಹಳೇ ಕಾನೂನು! ಕರ್ನಾಟಕ ಅರಣ್ಯ ಕಾಯ್ದೆಗೆ 2001ರಲ್ಲಿ ತಿದ್ದುಪಡಿ ತಂದು ಗಂಧ ಬೆಳೆಯುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ ಸಾರ್ವಜನಿಕವಾಗಿ ಗಂಧ ಬೆಳೆಯುವ ಧೈರ್ಯ ಯಾರಿಗೂ ಇಲ್ಲ. ದುರಾದೃಷ್ಟವೆಂದರೆ ಈ ವಿಷಯ ಕೆಲವರಿಗೆ ಗೊತ್ತಿಲ್ಲ.
ಬೆಂಗಳೂರು ನಗರ ವಿಭಾಗದ ಅರಣ್ಯ ವಲಯವನ್ನು ತೆಗೆದುಕೊಂಡರೆ ಐಐಟಿ, ಐಐಎಂ, ಐಐಎಸ್‌ಸಿ, ಬೆಂಗಳೂರು ವಿವಿ ಹಾಗೂ ಇನ್ನಿತರ ಸರ್ಕಾರಿ ಕಚೇರಿ ಆವರಣಗಳಲ್ಲಿ ಮಾತ್ರ ಗಂಧದ ಮರಗಳು ಕಂಡುಬರುತ್ತವೆ. ಅರಣ್ಯ ಇಲಾಖೆಗಳ ಬಳಿ ಗಂಧದ ಮರಗಳ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ- ಅಂಶಗಳಿಲ್ಲ. ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಇತಿಹಾಸ ಪ್ರಸಿದ್ಧ ಚಂದನವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ.
ಹಳ್ಳಿಗರಲ್ಲಿ ಗಂಧದ ಬಗ್ಗೆ ಬೇರೆಯದೇ ನಂಬಿಕೆ ಇದೆ. ಗಂಧ ಬೆಳೆದರೆ ಅದು ನಮ್ಮದಾಗುವುದಿಲ್ಲ. ಗಂಧ ಸರ್ಕಾರದ ಸ್ವತ್ತು. ಅದನ್ನು ಸರ್ಕಾರ ಮಾತ್ರವೇ ಬೆಳೆಯಬೇಕು, ವೈಯಕ್ತಿಕವಾಗಿ ಬೆಳೆಯುವ ಹಕ್ಕು ಯಾರಿಗೂ ಇಲ್ಲ. ಗಂಧವನ್ನು ಮಾರಾಟ ಮಾಡುವ ಹಾಗಿಲ್ಲ. ಗಂಧ ಬೆಳೆದರೆ ಅರಣ್ಯ ಅಧಿಕಾರಿಗಳು ಕಡಿದುಕೊಂಡು ಹೋಗುತ್ತಾರೆ……
ಇಂತಹ ತಪ್ಪು ತಿಳುವಳಿಕೆಗಳು ಜನರಲ್ಲಿವೆ. ಕರ್ನಾಟಕ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅರ್ಧ ದಶಕ ಕಳೆದರೂ ಈ ಕಾನೂನು ನಾಗರಿಕರಿಗೆ ನೀಡಿರುವ ಅಧಿಕಾರದ ಅರಿವನ್ನು ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ.
ಗಂಧ ಮಾರಟಕ್ಕೆ ಕೆಲ ನಿಮಮಾವಳಿಗಳಿವೆ. ಸಾರ್ವಜನಿಕರು ಗಂಧ ಬೆಳೆದರೆ ಸರ್ಕಾರ ಮಾರುಕಟ್ಟೆ ನೀಡುತ್ತದೆ. ಗಂಧ ಬೆಳೆದವರಿಗೆ ಬೋನಸ್‌ ಕೂಡ ನೀಡುತ್ತದೆ.
ಗಂಧ ಚೋರರು: ಅರಣ್ಯ ಇಲಾಖೆ ಅಧಿಕಾರಿಗಳು ಗಂಧ ಸಂತತಿ ಕಡಿಮೆಯಾಗಲು ಗಂಧದ ಕಳ್ಳತನವೇ ಕಾರಣ ಎನ್ನುತ್ತಾರೆ. ಅಂತರ ರಾಜ್ಯ ಗಂಧ ಚೋರರು ಗಂಧಕಳ್ಳತನದಲ್ಲಿ ತೊಡಗಿದ್ದಾರೆ. ಈ ಕಾರಣದಿಂದ ಗಂಧವನ್ನು ವೈಯಕ್ತಿಕವಾಗಿ ಬೆಳೆಯಲು ಜನರು ಹೆದರುತ್ತಾರೆ ಎಂಬ ಅಭಿಪ್ರಾಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದು ನಿಜ ಕೂಡ. ಇತ್ತೀಚೆಗೆ ಬೆಂಗಳೂರಿನ ಐಐಎಂ ಆವರಣದಲ್ಲಿ ಗಂಧ ಕಡಿದು ಇಬ್ಬರು ಅಂತರ ರಾಜ್ಯ ಕಳ್ಳರು ಸಿಕ್ಕಿ ಬಿದ್ದರು. ಬೆಂಗಳೂರು ವಿವಿ(ಜ್ಞಾನಭಾರತಿ) ಆವರಣದಲ್ಲಿ ಪ್ರತಿನಿತ್ಯ ಗಂಧದ ಕಳ್ಳತನ ನಡೆಯುವ ಬಗ್ಗೆ ವರದಿಯಿದೆ. ಸರಿಯಾದ ರಕ್ಷಣೆ ವ್ಯವಸ್ಥೆ ಇಲ್ಲದೆ ಗಂಧದ ಮರಗಳು ಕಳ್ಳರ ಕೊಡಲಿಗೆ ಬಲಿಯಾಗುತ್ತಿವೆ.

ಇತಿಹಾಸ: ಗಂಧದ ಮರಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ಗಂಧದ ಪರಿಮಳದ ಬಗ್ಗೆ ಪುರಾಣ ಸಾಹಿತ್ಯದಲ್ಲಿ ಉಲ್ಲೇಖವಿದೆ. ಗಂಧಕ್ಕೆ ಔಷಧೀಯ ಗುಣವಿದ್ದು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಕಾಳಿದಾಸನಿಂದ ಹಿಡಿದು ಟಿಪ್ಪು ಸುಲ್ತಾನನವರೆಗೂ ಗಂಧದ ಪರಿಮಳ ಹರಡಿತ್ತು. ಶ್ರೀರಂಗ ಪಟ್ಟಣ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಈಗ ಅಲ್ಲಿ ಗಂಧ ಕಾಣ ಸಿಗುವುದಿಲ್ಲ. ಒಂದು ಕಾಲದಲ್ಲಿ ಕರ್ನಾಟಕ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಮೈಸೂರು ಸ್ಯಾಂಡಲ್‌ಗೆ ಅಂತಾರಾಷ್ಟ್ರೀಯ ಖ್ಯಾತಿಯಿದೆ. ಇಂದು ಕರ್ನಾಟಕದ ಕಾಡುಗಳಲ್ಲಿ ಗಂಧದ ಮರ ತಡಕಿದರೂ ಸಿಗುವುದಿಲ್ಲ.
ಇಂದಿಗೂ ಗಂಧಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿದೆ. ಗಂಧದ ಕರಕುಶಲ ವಸ್ತುಗಳು, ಗಂಧದ ವಿಗ್ರಹಗಳಿಗೆ ಬಲು ಬೇಡಿಕೆಯಿದೆ. ಗಂಧದ ಎಣ್ಣೆಗೂ ಕೂಡ ಅಪಾರ ಬೇಡಿಕೆಯಿದೆ. ರಾಜ್ಯದ ಮಲೆನಾಡು ಪ್ರದೇಶದಲ್ಲಿ ಗಂಧ ಹೇರಳವಾಗಿ ದೊರೆಯುತ್ತಿತ್ತು. ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಪ್ರದೇಶ ಗಂಧಕ್ಕೆ ಹೆಸರುವಾಸಿಯಾಗಿತ್ತು. 1880ರ ವರದಿಯ ಪ್ರಕಾರ ರಾಜ್ಯದ ಒಟ್ಟು ಆದಾಯದಲ್ಲಿ ಶೇ. 30ರಷ್ಟು ಗಂಧದ ಪಾಲಿತ್ತು.

ಗಂಧ ಸಹಾಯವಾಣಿ: ಕರ್ನಾಟಕ ಅರಣ್ಯ ಇಲಾಖೆ ಗಂಧದಮರ ರಕ್ಷಣೆಗೆ ಹೊಸ ಮಾಡಿದೆ. ಗಂಧದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಸಹಾಯವಾಣಿಯೊಂದನ್ನು ರಚಿಸಿದ್ದು, ಆ ಮೂಲಕ ಗಂಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆ ಸಹಾಯವಾಣಿ ನೀಡಲಿದೆ.
ಬೆಂಗಳೂರು ನಗರ ಅರಣ್ಯ ವಲಯದ ಡಿಸಿಎಫ್‌ ಶ್ರೀವಾಸ್ತವ್‌ ಸಹಾಯವಾಣಿ ಕುರಿತು ಮಾಹಿಸಿ ನೀಡಿದ್ದಾರೆ. ಈ ಸಹಾಯವಾಣಿಯ ಅನುಕೂಲವನ್ನು ಸಾರ್ವಜನಿಕರೂ ಕೂಡ ಪಡೆಯಬಹುದಾಗಿದೆ. ಸಾರ್ವಜನಿಕರು ಗಂಧಬೆಳೆಯುವ ಎಲ್ಲಾ ಮಾಹಿತಿಯನ್ನು ಈ ಸಹಾಯವಾಣಿಯ ಮೂಲಕ ಪಡೆಯಬಹುದಾಗಿದೆ. ಅಲ್ಲದೆ ಸರ್ಕಾರ ಗಂಧ ಗಣತಿಯನ್ನು ಕೈಕೊಂಡಾಗ ಗಂಧ ಬೆಳೆದ ಮಾಲೀಕರು ಈ ಸಹಾಯವಾಣಿಗೆ ತಮ್ಮ ಮಾಹಿತಿಯನ್ನು ನೀಡಬಹುದಾಗಿದೆ.
ಈ ಸಹಾಯವಾಣಿಯ ಮುಖ್ಯವಾದ ಉದ್ದೇಶವೆಂದರೆ ಗಂಧ ಕಳ್ಳತನ ತಡೆಯುವುದು. ಗಂಧ ಕಳ್ಳತನದ ಬಗ್ಗೆ ಈ ಸಹಾಯವಾಣಿಯ ಮೂಲಕ ದೂರನ್ನೂ ಕೂಡ ಸಲ್ಲಿಸಬಹುದು.
ಅರಣ್ಯ ಇಲಾಖೆಯ ಈ ಪ್ರಯತ್ನ ಎಷ್ಟರಮಟ್ಟಿಗೆ ರಾಜ್ಯಕ್ಕೆ ಗಂಧದ ಪರಿಮಳ ತರಬಲ್ಲದು ಎಂಬುದನ್ನು ಕಾದು ನೋಡಬೇಕು. ಗಂಧರಾಜ್ಯ ನಿರ್ಮಾಣ ಆಗದಿದ್ದರೆ ಬೇಡ, ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್‌ ಆಗದಿದ್ದರೆ ಸಾಕು

ಸೋಮವಾರ, ಸೆಪ್ಟೆಂಬರ್ 29, 2008






ಪರಿಸರ ಸ್ನೇಹಿಗಳಾಗೋಣ
ಗಣೇಶನನ್ನು ಆರಾಧಿಸೋಣ

ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ ಮತ್ತೊಮ್ಮೆ ಬಂದಿದೆ. ಕಡ್ಲೆ ಕಾಳು ಗಣಪ, ಧಾನ್ಯ ಗಣಪ, ಸಾಸಿವೆ ಗಣಪ, ನಾಟ್ಯ ಗಣಪ, ಬಾಲ ಗಣಪ, ಬಾದಾಮಿ ಗಣಪ, ಕಮಲದ ಮೇಲೆ ಅರಳಿದ ಗಣಪ, ನಿಂತಿರುವ ಗಣಪ. ಕೂತಿರುವ ಗಣಪ……ಈಗಿನ ಅಭಿನವ್‌ ಬಿಂದ್ರಾ ಗಣಪ ಮುಂತಾದ ಮೂರುತಿ ಕೊಳ್ಳಲು ಭಕ್ತರಿಗೆ ಸಂಭ್ರಮವೋ ಸಂಭ್ರಮ.
ಕೊಳ್ಳಿ. ಬೇಡ ಎನ್ನಲಾಗುವುದಿಲ್ಲ. ಆದರೆ ರಾಸಾಯನಿಕ ಬಣ್ಣ ಬಳಸಿ ಮಾಡಿದ ಗಣಪನನ್ನು ಮಾತ್ರ ಕೊಳ್ಳಬೇಡಿ. ಇತ್ತೀಚೆಗೆ ಗಣಪನ ವಿಗ್ರಹವನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸಿ ಮಾಡಲಾಗುತ್ತಿದೆ. ಇಂತಹ ಮೂರ್ತಿಗಳನ್ನು ಮನೆಯಲ್ಲಿ ಇಡುವುದರಿಂದ ಗಂಟಲು ಬೇನೆ, ಚರ್ಮ ತುರಿಕೆ, ಕಣ್ಣು ಉರಿಯುವಿಕೆ, ಮೂಗು ಕಟ್ಟುವಂತಹ ಖಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ಪರಿಸರ ಸ್ನೇಹಿಗಳಾಗೋಣ: ಗಣೇಶನನ್ನು ಆರಾಧಿಸುವಾಗ ಭಕ್ತರು ಎಚ್ಚರಿಕೆಯಿಂದ ಆಚರಿಸಿದರೆ ಪರಿಸರವನ್ನು ಸಂರಕ್ಷಿಸಬಹುದು. ಗಣೇಶ ಹಬ್ಬ ಬಂದಾಗಾದರೂ ಪರಿಸರ ಸ್ನೇಹಿಗಳಾಗಬೇಕಲ್ಲವೇ?
ಹಿಂದೆ ಗಣೇಶನನ್ನು ಕೆಲವು ಮಂದಿ ಮಾತ್ರ ಮಾಡುತ್ತಿದ್ದರು. ನಿಜವಾಗಿ ಶಿಲ್ಪಕಲೆ ಗೊತ್ತಿದ್ದವರು ಮಾತ್ರ ಮಾಡುತ್ತಿದ್ದರು. ವಂಶ ಪಾರಂಪರ್ಯವಾಗಿ ಬಂದಿದ್ದ ಕಾಯಕವಾಗಿತ್ತು. ವಿಗ್ರಹ ಮಾಡುವುದು ಪರಮಾತ್ಮನ ಆರಾಧನೆ ಎಂದೇ ಭಾವಿಸುತ್ತಿದ್ದರು. ಇವತ್ತು ಅವರು ಮೂಲೆ ಗುಂಪಾಗಿದ್ದಾರೆ. ಈಗ ಗಣೇಶನನ್ನು ಲಾಭ ಗಳಿಕೆ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ. ಜೇಡಿ ಮಣ್ಣಿನ ಗಜಾನನನನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಈಗೆಲ್ಲಾ ಮೌಲ್ಡ್‌ ಗಣಪನನ್ನು ಮಾಡುತ್ತಿದ್ದಾರೆ. ಇದಕ್ಕೆ ಕಲಾವಿದರ ಅವಶ್ಯಕತೆ ಇಲ್ಲಾ. ಮೌಲ್ಡ್‌ ಮೂಲಕ ಯಾರು ಬೇಕಾದರೂ ಮಾಡಬಹುದು.
ಮಣ್ಣಿನಿಂದ ಮಾಡಿದ ಗಣಪನ ವಿಸರ್ಜನೆ ಬಲು ಸುಲಭ. ಎಲ್ಲೇ ವಿಸರ್ಜನೆ ಮಾಡಿದರೂ ಬಲು ಬೇಗನೆ ಕರಗಿ ಹೋಗುತ್ತಾನೆ. ಇದರಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವೂ ಬೀರುವುದಿಲ್ಲ. ಆದರೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ಸಿನಿಂದ ಮಾಡಿದ ಗಣಪಂದಿರು ಅಷ್ಟು ಬೇಗನೆ ಕರಗಲಾರರು. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾರೆ.
ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಜೊತೆ ಬಳಸುವ ರಾಸಾಯನಿಕಗಳು ಬಹಳ ಕೆಟ್ಟವು. ಇವು ಕಣ್ಣಿಗೆ ಸೋಕಿದರೆ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಈ ಮೂರ್ತಿಗಳನ್ನು ಮಕ್ಕಳು ಮುಟ್ಟದಂತೆ ನೋಡಿಕೊಳ್ಳುವುದು ಒಳ್ಳೆಯದು.
ಬಿಬಿಎಂಪಿ ಕ್ರಮ: ಗಣೇಶ ಹಬ್ಬ ಬಂದಾಗಲೆಲ್ಲಾ ಪಾಲಿಕೆ ಕ್ರಮಕೈಗೊಳ್ಳುವುದು ಮಾಮೂಲು. ಅದರಂತೆ ಈ ವರ್ಷವೂ ಕೂಡ ಶಾಂತಿಯುತ ಗಣೇಶ ವಿಸರ್ಜನೆಗೆ ಕ್ರಮ ಕೈಗೊಂಡಿದೆ.
ಬಿಬಿಎಂಪಿ ಗಣೇಶ ವಿಸರ್ಜನೆ ಉದ್ದೇಶಕ್ಕಾಗಿಯೇ ಕೆರೆಗಳ ಬದಿಯಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಕಡ್ಡಾಯವಾಗಿ ಅಲ್ಲಿಯೇ ವಿಸರ್ಜಿಸಬೇಕೆಂದು ಆದೇಶ ನೀಡಲಾಗಿದೆ. ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆಗಳಲ್ಲಿ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಕೆರೆ ಬಾಗದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವವರಿಗೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಆದೇಶಿಸಿದೆ.
ಗಣೇಶ ಪೂಜೆಗಾಗಿ ಬಳಸುವ ಪೂಜಾ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅದಕ್ಕಾಗಿಯೇ ಇಡಲಾಗಿರುವ ಡಸ್ಟ್‌ಬಿನ್‌ಗಳಲ್ಲಿ ಹಾಕಬೇಕಾಗಿ ಬಿಬಿಎಂಪಿ ಕೋರಿದೆ. ಕೆರೆಗಳ ಗೇಟ್‌ನಲ್ಲಿ ಈ ಡಸ್ಟ್‌ಬಿನ್‌ಗಳನ್ನು ಆಯಾ ಕೆರೆಗಳ ಮುಖ್ಯ ಗೇಟ್‌ನಲ್ಲಿ ಇಡಲಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ರಾತ್ರಿ 10: 30 ಗಂಟೆಯ ನಂತರ ಗಣೇಶ ವಿಸರ್ಜನೆ ಅವಕಾಶವಿಲ್ಲ.
ಮೊಬೈಲ್‌ ಟ್ಯಾಂಕ್‌: ಬಿಬಿಎಂಪಿ ಈ ಬಾರಿ ಗಣೇಶ ವಿಸರ್ಜನೆಗೆ ವಿಶೇಷವಾಗಿ ಮೊಬೈಲ್‌ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿದೆ. ಎರಡು ಅಡಿ ಅಥವಾ ಅದಕ್ಕಿಂತ ಚಿಕ್ಕ ಗಣೇಶ ಮೂರ್ತಿಗಳನ್ನು ಈ ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬಹುದಾಗಿದೆ.
ಪಟಾಕಿ ಹೊಡೆಯುವಾಗ ಎಚ್ಚರ: ಗಣೇಶ ಹಬ್ಬ ಎಂದರೆ ಪಟಾಕಿ ಹಬ್ಬವೂ ಕೂಡ. ದೀಪಾವಳಿ ಹಬ್ಬವಾದರೆ ಎಲ್ಲರೂ ಪಟಾಕಿ ಹೊಡೆಯುತ್ತಾರೆ. ಆದರೆ ಗಣೇಶ ಹಬ್ಬದಲ್ಲಿ ಎಲ್ಲರೂ ಪಟಾಕಿ ಹೊಡೆಯುವುದಿಲ್ಲ. ಆದ್ದರಿಂದ ರಾತ್ರಿವೇಳೆ ಪಟಾಕಿ ಸಿಡಿಸಿದರೆ ಬೇರೆಯವರಿಗೆ ತೊಂದರೆ ಆಗುತ್ತದೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಊರೆಲ್ಲಾ ಮೆರವಣಿಗೆ ಒಳ್ಳೆಯದಲ್ಲ. ಸುಮ್ಮನೆ ತೊಂದರೆ ಸೃಷ್ಟಿ. ಗಣೇಶನನ್ನು ಕೂರಿಸಿದ ಜಾಗದಲ್ಲಿ ಪೂಜಿಸಿ, ಸೀದಾ ವಿಸರ್ಜನಾ ಸ್ಥಳಕೆ ತೆಗೆದುಕೊಂಡು ಹೋಗಿ ಅಲ್ಲೊಮ್ಮೆ ಪೂಜಿಸಿ ವಿಸರ್ಜಿಸಿದರೆ ಮುಗಿಯಿತು.
ಮೈಕಾಸುರನ ಹಾವಳಿ ಬೇಡ: ಇದು ಬರೀ ಕಿರಿ ಕಿರಿ. ಮೈಕ್‌ ಹಾಕುವುದರಿಂದ ಶಬ್ದ ಮಾಲಿನ್ಯವೂ ಆಗುತ್ತದೆ. ಮೊದಲೇ ಈ ಊರ ಜನ ವಾಹನ ಶಬ್ದಕ್ಕೇ ಕಿವುಡಾಗುತ್ತಿದ್ದಾರೆ. ಅನಿಯಮಿತವಾಗಿ ಮೈಕ್‌ ಹಾಕುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತದೆ. ಅಲ್ಲದೆ ನಿಯಮಿತ ಅವಧಿಗಿಂತ ಹೆಚ್ಚು ಕಾಲ ಮೈಕ್‌ ಹಾಕುವುದಾದರೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್‌ ಠಾಣೆಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಇವಿಷ್ಟು ಗಣೇಶ ಹಬ್ಬದ ಪ್ರಯುಕ್ತ ನಾವೆಲ್ಲರೂ ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳು. ಎಲ್ಲರೂ ಸ್ವಯಂ ಸ್ಫೂರ್ತಿಯಿಂದ ಕ್ರಮ ತೆಗೆದುಕೊಂಡರೆ ಅಲ್ಲಿ ಸಮಸ್ಯೆ ಎಂಬುದೇ ಉದ್ಬವವಾಗಲಾರದು. ಯಾರದೋ ಒತ್ತಾಯಕ್ಕಾಗಿ ತೆಗೆದುಕೊಂಡಾಗ ಸಮಸ್ಯೆ ಉಂಟಾಗುತ್ತದೆ.
ನಮ್ಮಗಣೇಶ ಹಬ್ಬದ ಶುಭ ಗಳಿಗೆಯಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡೋಣ, ಮಾತನಾಡೋಣ, ಯೋಚಿಸೋಣ. ಜೈ ಗಣೇಶ.



ಮಹತ್ವ ಪಡೆಯುತ್ತಿರುವ ಪರಿಸರ ಕಾನೂನು


ಎಂ.ಸಿ. ಮೆಹತಾ ಎಂಬ ಪರಿಸರ ಪ್ರೇಮಿ ಇಲ್ಲದಿದ್ದರೆ ಬಹುಶಃ ಪರಿಸರ ಕಾನೂನುಗಳ ಒಂದು ಸ್ಪಷ್ಟ ಚಿತ್ರಣ ಭಾರತದಲ್ಲಿ ಸಿಗುತ್ತಿರಲಿಲ್ಲ. ಭಾರತೀಯ ಪರಿಸರ ಕಾನೂನು ಉದಯವಾಗುವುದಕ್ಕೆ ಮೆಹತಾ ಕೊಡುಗೆ ಅಪಾರ. ನಿಜವಾಗಿ ಪರಿಸರ ಕಾನೂನು ಕಾನೂನೇ ಅಲ್ಲ, ಅದು ಸರ್ವೋಚ್ಛ ನ್ಯಾಯಾಲಯದ ಕೊಡುಗೆ ಎಂದು ಹೇಳುವುದುಂಟು. ಪರಿಸರ ಸಮಸ್ಯೆಯೊಂದು ಸಾರ್ವಜನಿಕ ಹಿತಾಸಕ್ತಿ ದಾವೆಯ ರೂಪದಲ್ಲಿ ಕೋರ್ಟ್‌ ಮೆಟ್ಟಿಲೇರಿದಾಗ ತೀರ್ಪಿನ ರೂಪದಲ್ಲಿ ಹೊರಬಂದ ಅಭಿಪ್ರಾಯವೇ ಇಂದು ಪರಿಸರ ಕಾನೂನಾಗಿ ರೂಪುಗೊಂಡಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಇದಕ್ಕೆ ಹಲವು ಉದಾಹರಣೆಗಳಿವೆ. ಆ ಪೈಕಿ ಇತ್ತೀಚಿನ ಕೆಲವು…
* ತಾಜ್‌ ಪ್ರಕರಣ: ಆಗ್ರಾ ಸುತ್ತಮುತ್ತಲಿನ ಕೈಗಾರಿಕೆಗಳಿಂದ ವಿಶ್ವ ಪ್ರಸಿದ್ಧ ಸ್ಮಾರಕ ತಾಜ್‌ಮಹಲ್‌ನ ಅಮೃತ ಶಿಲೆಗಳು ಹಸಿರು ಬಣ್ಣಕ್ಕೆ ತಿರುಗಿ ಹೊಳಪು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಎಂ.ಸಿ. ಮೆಹತಾ ಸಾರ್ವಜನಿಕ ಹಿತಾಸಕ್ತಿ ದಾವೆ ಹಿಡಿದು ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದರು. ಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಕೈಗಾರಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿತು. ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಭಾರತೀಯ ಪರಿಸರ ಕಾನೂನುಗಳಲ್ಲಿ ಲ್ಯಾಂಡ್‌ಮಾರ್ಕ್‌ ಜಡ್ಜ್‌ಮೆಂಟ್‌.
* ಗಂಗಾನದಿ ಪ್ರಕರಣ: ಭಾರತೀಯರಿಗೆ ಗಂಗಾನದಿ ಬಲು ಪವಿತ್ರವಾದುದು. ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿ ಮಿಂದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಆದರೆ ಗಂಗಾನದಿಯ ಇನ್ನೊಂದು ಮುಖ ಸಾವು! ಕೈಗಾರಿಕೆಗಳು ತಡೆಯಿಲ್ಲದೆ ಬಿಡುತ್ತಿದ್ದ ತ್ಯಾಜ್ಯದಿಂದ ಪವಿತ್ರ ನೀರು ಅಪವಿತ್ರಗೊಂಡಿತ್ತು. ಸಾಧು ಸಂತರ ಹೆಣಗಳು ಇಲ್ಲಿ ತೇಲಾಡುತ್ತಿದ್ದವು. ಇದನ್ನು ಎಂ.ಸಿ. ಮೆಹತಾ ಪ್ರಶ್ನಿಸಿದರು. ಗಂಗಾ ನದಿ ಉಳಿವಿಗಾಗಿ ಕೋರ್ಟ್‌ 30ಕ್ಕೂ ಹೆಚ್ಚು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿತು. ಇವು ಪರಿಸರ ಕಾನೂನಿನ ತತ್ವಗಳಾಗಿ ರೂಪುಗೊಂಡಿವೆ.
* ದೆಹಲಿ ವಾಯುಮಾಲಿನ್ಯ ಪ್ರಕರಣ: ದೆಹಲಿ ನಗರದಲ್ಲಿ ವಾಯುಮಾಲಿನ್ಯ ಮಿತಿ ಮೀರಿತ್ತು. ವಿಶ್ವದ ನಾಲ್ಕನೇ ಅತಿ ಹೆಚ್ಚು ಮಲಿನ ನಗರ ಎಂಬ ಅಗ್ಗಳಿಕೆ ಅದಕ್ಕಿತ್ತು, ಈಗಲೂ ಇದೆ. ಎಲ್ಲೆಂದರಲ್ಲಿ ಕೈಗಾರಿಕೆಗಳು ಅಕ್ರಮವಾಗಿ ತಲೆ ಎತ್ತಿದ್ದವು. ಇವುಗಳ ವಿರುದ್ಧ ಎಂ.ಸಿ. ಮೆಹತಾ ರಿಟ್‌ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ ಈ ರಿಟ್‌ ಅರ್ಜಿಗೆ ಉತ್ತರವಾಗಿ ಕಾನೂನನ್ನು ಕಡೆಗಣಿಸಿದ್ದ 8378 ಕೈಗಾರಿಕೆಗಳಿಗೆ ನೋಟಿಸ್‌ ಜಾರಿ ಮಾಡಿತು. ನಂತರ `ದೆಹಲಿ ಮಾಸ್ಟರ್‌ ಪ್ಲಾನ್‌’ ರಚಿಸಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆಯಾಗದ ಹಾಗೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿತು.
ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳನ್ನು ಎಂ.ಸಿ. ಮೆಹತಾ ಗೆದ್ದಿದ್ದಾರೆ. ಅವರು ಒಬ್ಬಂಟಿ ಹೋರಾಟಗಾರ. ಪರಿಸರ ವಕೀಲ. ಭಾರತ ಸಂವಿಧಾನ ತನ್ನ 21ನೇ ವಿಧಿಯನ್ವಯ ಭಾರತೀಯ ಪ್ರಜೆಗಳಿಗೆ `ಜೀವಿಸುವ ಹಕ್ಕು’ ನೀಡುತ್ತದೆ. ಈ ವಿಧಿಯಲ್ಲಿ `ಸ್ವಾಸ್ಥ್ಯ ಪರಿಸರದಲ್ಲಿ ಜೀವಿಸುವ ಹಕ್ಕು’ ಸೇರಿಸುವಲ್ಲಿ ಮೆಹತಾರ ಪಾತ್ರ ಮಹತ್ವವಾದುದು. ಈ ನಿಟ್ಟಿನಲ್ಲಿ ಮೆಹತಾರನ್ನು ಭಾರತೀಯ ಪರಿಸರ ಕಾನೂನಿನ ನಿರ್ಮಾತೃ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ.
ಜಗತ್ತಿನ ಖ್ಯಾತ ಪರಿಸರವಾದಿಗಳಲ್ಲಿ ಎಂ.ಸಿ. ಮೆಹತಾ ಅತ್ಯಂತ ಪ್ರಭಾವಿ ತಜ್ಞ. ಪರಿಸರದ ಸೇವೆಗಾಗಿ ನೀಡುವ `ಎನ್ವಿರಾನ್‌ಮೆಂಟಲ್‌ ಗೋಲ್ಡ್‌ಮನ್‌ ಪ್ರೈಜ್‌’ ಮೆಹತಾರಿಗೆ ಸಂದಿದೆ.
ಜಾಗತಿಕ ವಿಚಾರ: ಪರಿಸರ ಮಾಲಿನ್ಯದ ವಿಷಯಗಳು ಯಾವುದೇ ಒಂದು ದೇಶಕ್ಕೆ ಅಥವಾ ಪ್ರದೇಶಕ್ಕೆ ಸೀಮಿತವಲ್ಲ. ಪರಿಸರ ಅಕ್ಷರಶಃ ಜಾಗತಿಕ ವಿಚಾರ. ಈ ಸೃಷ್ಟಿಯನ್ನು ಅನುಭವಿಸಲು ಎಲ್ಲಾ ರಾಜ್ಯಗಳಿಗೂ ಸಮಾನ ಹಕ್ಕಿದೆ. ಭೂಮಿಯ ಯಾವುದೋ ಒಂದು ಜಾಗದಲ್ಲಿ ನಡೆಯುವ ಪರಿಸರ ಹಾನಿ ಚಚುವಟಿಕೆಯ ಪರಿಣಾಮ ಎಲ್ಲಾ ರಾಜ್ಯಗಳ ಮೇಲೆ ಬೀರುತ್ತದೆ. ಆದ್ದರಿಂದಾಗಿ ಪರಿಸರದ ಮೇಲೆ ಏನೇ ಆದರೂ ಅದರ ಝಳಪು ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತದೆ.
ಪಠ್ಯವಾಗಿ ಪರಿಸರ ಕಾನೂನು: ಕಳೆದ ನಾಲ್ಕು ದಶಕಗಳ ಹಿಂದೆ `ಪರಿಸರ’ದ ವಿಷಯ ಸಮಾಜ ವಿಜ್ಞಾನದ ಒಂದು ಭಾಗವಾಗಿತ್ತು. ಆನಂತರ `ಪರಿಸರ ವಿಜ್ಞಾನ’ ಎಂಬ ಸ್ವತಂತ್ರ ವಿಷಯ ಅಸ್ತಿತ್ವಕ್ಕೆ ಬಂತು. ಇಂದು ವಿವಿಗಳು ಇದನ್ನು ಬೋಧಿಸುತ್ತಿವೆ. ಆದರೆ ಇದರ ಜ್ಞಾನ ಸ್ಕ್ರೆನ್ಸ್‌ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುತ್ತಿದೆಯೇ ಹೊರತು ವಿಜ್ಞಾನೇತರ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ಇದು ಇದರ ಪ್ರಮುಖ ದೋಷ. ಅಷ್ಟಕ್ಕೂ ವಿಜ್ಞಾನ ಎಂಬುದು ಲ್ಯಾಬೊರೇಟರಿಗಳಲ್ಲಿ ನಡೆಯುವ ಆಪರೇಷನ್‌! ಇದು ಸಾಮಾನ್ಯನ ಕೈಗೆ ಎಟಕುವುದಿಲ್ಲ.
ಪರಿಸರದ ಒಂದು ಭಾಗವಾಗಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಪರಿಸರ ಕಾನೂನು ಅರಿಯುವ ಅವಶ್ಯಕತೆ ಇದೆ. ಪಾರ್ಲಿಮೆಂಟಿನಲ್ಲಿ ಪಾಸಾಗಿ ರಾಷ್ಟ್ರಾಧ್ಯಕ್ಷರಿಂದ ಅಂಕಿತ ಪಡೆದ ಕಾನೂನು ಮಾತ್ರ ಪರಿಸರ ಕಾನೂನಲ್ಲ. ಪರಿಸರ ಕಾನೂನನ್ನು ಅಂತಾರಾಷ್ಟ್ರೀಯ ಮಾತುಕತೆ, ಒಂಬಡಿಕೆಗಳ ಗುಚ್ಛ ಎನ್ನಲಾಗುತ್ತದೆ. (Environmental law is a bunch of international conventions, summits, agreements’) ಯಾಕೆಂದರೆ ಪರಿಸರ ಅಧ್ಯಯನವನ್ನು ಯಾವುದೋ ಒಂದು ರಾಷ್ಟ್ರವನ್ನು ಗಮನದಲ್ಲಿ ಇಟ್ಟುಕೊಂಡು ಅಭ್ಯಸಿಸಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಬೆಳವಣಿಗೆಗಳನ್ನು ಅರಿಯುವುದು ಅಗತ್ಯ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ೃಹತ್‌ ಪರಿಸರ ಚಳವಳಿಯೇ ಇದೆ. ಭೂಮಿ ಮಾತುಕತೆಗಳು (Earth summits), 21 ಅಂಶಗಳ ಕಾರ್ಯಸೂಚಿ (21 Agenda), ಮುನ್ನೆಚ್ಚರಿಕೆ ತತ್ವ (Precautionery principle), ರಿಯೋ ಘೋಷಣೆ (Rio declaration), ರಚನಾತ್ಮಕ ಅಭಿವೃದ್ಧಿ( sustainable development), ಸ್ಟಾಕ್‌ಹೋಮ್‌ ಮಾತುಕತೆ (Stockholm conference), ಮುಂತಾದ ಹತ್ತು ಹಲವು ನಿಯಮಾವಳಿ ಮಾತುಕತೆಗಳಿವೆ. ಇವುಗಳನ್ನು ಅರಿತಾಗ ಮಾತ್ರ ಪರಿಸರ ಅಧ್ಯಯನ ಪರಿಪೂರ್ಣ.
ವಿದೇಶಗಳಲ್ಲಿ ಪರಿಸರದ ಸಂಪೂರ್ಣ ಅಧ್ಯಯನವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಹಂತದಲ್ಲಿ ಸಾರ್ವತ್ರಿಕ ಪಠ್ಯವಾಗಿ ಸೇರಿಸಲಾಗಿದೆ. ಯಾವುದೇ ಕೋರ್ಸ್‌ ಆಗಿದ್ದರೂ ಪರಿಸರ ಅಧ್ಯಯನ ಕಡ್ಡಾಯ.
ವೈದ್ಯಕೀಯ ಶಿಕ್ಷಣದಲ್ಲಿ ಪರಿಸರ ಕಾನೂನು: ಭಾರತ ಈಗ ಪರಿಸರ ಅಧ್ಯಯನದ ಮಹತ್ವವನ್ನು ಅರಿತಂತೆ ಕಾಣುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿ ಪರಿಸರ ಕಾನೂನು ಮತ್ತು ಭಾರತೀಯ ಸಂವಿಧಾನವನ್ನು ಪಠ್ಯವಾಗಿ ಅಳವಡಿಸಿದೆ. ಎಂಜಿನಿಯರಿಂಗ್‌ನಲ್ಲಿ ಸಂವಿಧಾನವನ್ನು ಈಗಾಗಲೇ ಬೋಧಿಸಲಾಗುತ್ತಿದೆ. ಪರಿಸರ ಕಾನೂನನ್ನೂ ಅಳವಡಿಸುವ ಚಿಂತನೆ ಇದೆ. ಇವರಿಗೆ ಬೋಧಿಸುವವರು ಯಾರು ಗೊತ್ತೆ? ಪರಿಸರ ವಿಜ್ಞಾನ ಕಲಿತ ವಿಜ್ಞಾನ ಅಧ್ಯಾಪಕರಲ್ಲ. ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (LL.M) ಕಲಿತ ಕಲಾ ಅಧ್ಯಾಪಕರು. ಇದು ನಿಜಕ್ಕೂ ವಿಶೇಷ. ಹೇಳಿಕೊಡುವವರಿಗೂ, ಕಲಿಯುವವರಿಗೂ ಹೊಸ ಅನುಭವ.
ಭಾರತದಲ್ಲಿ ಪರಿಸರ ಕಾನೂನನ್ನು ಸ್ವತಂತ್ರವಾಗಿ ಎರಡು ಕಡೆ ಮಾತ್ರ ಬೋಧಿಸಲಾಗುವುದು. ಬೆಂಗಳೂರು ವಿವಿ ಮತ್ತು ದೆಹಲಿಯ ಜವಹರ್‌ ಲಾಲ್‌ ನೆಹರು ವಿವಿ. ಬೆಂಗಳೂರಿನಲ್ಲಿ ಪರಿಸರ ಕಾನೂನು ಪಠ್ಯವಾಗಿರುವುದು ಕರ್ನಾಟಕದ ಹೆಮ್ಮೆ. ಪರಿಸರ ಕಾನೂನು ಕಲಿಯಲು ಇಲ್ಲಿಗೆ ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಪರಿಸರ ಕಾನೂನಿನಲ್ಲಿ ಸಂಶೋಧನೆ ನಡೆಸಿರುವ ಡಾ. ಸುಬ್ರಮಣ್ಯ ಮತ್ತು ಡಾ. ಲತಿಕಾ ನಾಥ್‌ (ಇಬ್ಬರೂ ದೆಹಲಿಯ ಜೆಎನ್‌ಯುವಿನಲ್ಲಿ ಕಲಿತವರು) ಎಂಬ ಇಬ್ಬರು ಹಿರಿಯ ಪ್ರಾಧ್ಯಾಪಕರು ಬೆಂಗಳೂರು ವಿವಿಯಲ್ಲಿದ್ದಾರೆ.
ಪರಿಸರ ಕಾನೂನು ಒಂದು ವಿಶಿಷ್ಟವಾದ ಪಠ್ಯವಿಷಯ. ಇದರಲ್ಲಿ ಕಲೆ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇವೆ. ಕಾನೂನು ಎಂದ ಮೇಲೆ ಅಲ್ಲಿ ಪ್ರಕರಣ ಅಧ್ಯಯನ ಇದ್ದೇ ಇರುತ್ತದೆ. ಇದು ನಿಜವಾಗಿಯೂ ಕುತೂಹಲಕರವಾಗಿರುತ್ತದೆ. ಸಂವಿಧಾನವನ್ನು ಪ್ರಾಥಮಿಕ ಶಿಕ್ಷಣಕ್ಕೆ ಅಳವಡಿಸಿರುವಂತೆ ಪರಿಸರ ಕಾನೂನನ್ನು ಅಳವಡಿಸಿದರೆ ಮಕ್ಕಳಿಗೆ ವಿಷಯದ ಮೇಲಿನ ಕುತೂಹಲ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರ ಕಾನೂನು ವಿಜ್ಞಾನ ಸಂಬಂಧೀ ವಿಷಯವಾದರೂ ಕಲಾ ವಿದ್ಯಾರ್ಥಿಗಳಿಗೂ ಕಲಿಯುವ ಅವಕಾಶವಿದೆ. ದುರದೃಷ್ಟವೆಂದರೆ ಪರಿಸರ ಕಾನೂನು ಅಧ್ಯಯನ ಕಾನೂನು ಪದವಿಗೆ ಮಾತ್ರ ಸೀಮಿತವಾಗಿದೆ.


ಬರಹ:
ಯೋಗೇಶ್‌ಮಾರೇನಹಳ್ಳಿ