ಶನಿವಾರ, ಅಕ್ಟೋಬರ್ 11, 2008
ಕಾಡಿನ ರಾಜ ಹುಲಿರಾಯನ ಸಂಖ್ಯೆ ದಿನೇ ದಿನೇ ಕುಗ್ಗುತ್ತಿದೆ. ಇಡೀ ಭಾರತ ದೇಶವನ್ನು ತಡಕಾಡಿದರೆ 1400ಕ್ಕಿಂತ ಹೆಚ್ಚು ಹುಲಿಗಳು ಸಿಗಲಾರವು. ಈ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲವಾಗುತ್ತಿರುವುದು ಈ ದೇಶದ ಶೇಮ್ ಶೇಮ್!
ಅತಿ ಹೆಚ್ಚು ಅಂದರೆ ಉತ್ತರ ಪ್ರದೇಶ ರಾಜ್ಯದಲ್ಲಿ 920 ಹುಲಿಗಳಿವೆ. ಅತಿ ಕಡಿಮೆ ಅಂದರೆ ಗುಜರಾತ್‌ನಲ್ಲಿ ಒಂದು ಹುಲಿ ಮಾತ್ರ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಹುಲಿಯೂ ಇಲ್ಲ.
ಹುಲಿ ಸಂರಕ್ಷಣೆ ಕುರಿತಂತೆ ಕರ್ನಾಟಕ ರಾಜ್ಯದ ಪರಿಸ್ಥಿತಿ ಪರವಾಗಿಲ್ಲ ಅನ್ನಬಹುದು. ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ವನ್ಯಜೀವಿ ಘಟಕ ಹುಲಿ ಸಂರಕ್ಷಣೆಗೆ ಹಲವು ಕಾರ್ಯಕ್ರಮ ರೂಪಿಸಿದೆ. ಒಟ್ಟು 350 ಹುಲಿಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ. ಇಲ್ಲಿ ನಾಲ್ಕು ರಾಷ್ಟ್ರೀಯ ಉದ್ಯಾನ ವನಗಳಿವೆ. ಇವುಗಳಲ್ಲಿ ನಾಗರಹೊಳೆ ಉದ್ಯಾನವನದಲ್ಲಿ 14 ಹುಲಿಗಳಿದ್ದರೆ, ಬಂಡೀಪುರ ಉದ್ಯಾನ ವನದಲ್ಲಿ 24 ಹುಲಿಗಳಿವೆ.
ಹುಲಿ ಸಂಖ್ಯೆ ಕಡಿಮೆಯಾಗುತ್ತಿರುವುದು ಇಡೀ ದೇಶವನ್ನು ಆತಂಕಕ್ಕೆ ಈಡು ಮಾಡಿದೆ. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಬಹಳ ಗಂಭೀರವಾದ ಚರ್ಚೆ ನಡೆಯುತ್ತಿದೆ.
ಮುಖ್ಯವಾಗಿ ಹುಲಿ ಸಂಖ್ಯೆ ಕ್ಷೀಣಿಸಲು ಅಕ್ರಮ ಬೇಟೆಯೇ ಕಾರಣ. ವಿದೇಶದಲ್ಲಿ ಹುಲಿಯ ಅಂಗಗಳಿಗೆ ಬಹಳ ಬೇಡಿಕೆ ಇದೆ. ಔಷಧ ತಯಾರಿಕೆಯಲ್ಲಿ ಹುಲಿ ಅಂಗಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಚೈನಾಕ್ಕೆ ಭಾರತೀಯ ಹುಲಿಗಳ ಅಂಗಗಳು ಅಕ್ರಮವಾಗಿ ರವಾನೆಯಾಗುತ್ತಿವೆ ಎಂಬ ವರದಿಯಿದೆ.
ಪ್ರಕೃತಿ ಕೂಡ ಹುಲಿ ರಕ್ಷಣೆಗೆ ಮಾರಕವಾಗಿದೆ. ಒಂದು ಪ್ರಾಣಿಯ ಆಹಾರವಾಗಿ ಇನ್ನೊಂದು ಪ್ರಾಣಿಯನ್ನು ಬಲಿಕೊಡಬೇಕು ಎಂದು ಫುಡ್ ಚೈನ್ ಹೇಳುತ್ತದೆ. ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವಂತೆ. ದೊಡ್ಡ ಹುಲಿ ಸಣ್ಣ ಹುಲಿಯನ್ನು ತನ್ನ ಹೊಟ್ಟೆಗಾಗಿ ಬಲಿಕೊಡುತ್ತಿದೆ.
ಮಂಗಳವಾರ, ಅಕ್ಟೋಬರ್ 7, 2008
ಈ ಮೇಲಿನ ಚಿತ್ರ ನೋಡಿ. ಇದು ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಅರ`ಮನೆ'. ಮನೆಯ ನೆಲ ನೋಡಿ. ಹುಲಿ ಮತ್ತು ಚಿರತೆ ಚರ್ಮದ ಟೈಲ್ಸ್ ಅಥವಾ ಇನ್ನೇನೋ...ಹಾಕಿಸಿದ್ದಾರೆ. ಈ ಮಹಾರಾ`ಜ'ಯರಿಗೆ ಬೇರೆ ಇನ್ನೇನೂ ಸಿಗಲಿಲ್ಲವೆ? ಪ್ರಾಣಿ ಚರ್ಮವೇ ಬೇಕಿತ್ತಾ? ಈಗ ಪ್ರಾಣಿ ನಿಷೇಧ ಕಾನೂನು ಇಲ್ಲದಿದ್ದರೆ ಬಂದೂಕು ಹಿಡಿದು ಬೇಟೆಗಾಗಿ ಕಾಡಿಗೆ ಹೊರಟುಬಿಡುತ್ತಿದ್ದರೇನೋ.
ಪ್ರಾಣಿಗಳ ಚರ್ಮ ಇರೋ ಹಾಸಿನ ಮೇಲೆ ನಡೆದಾಡುವುದು ತರವೇ? ಸುಸಂಸ್ಕೃತ ವಂಶಸ್ತರಾಗಿ, ದೊಡ್ಡ ಮನುಷ್ಯರಾಗಿ ಸಣ್ಣ ವಿಷಯಗಳ ಮೇಲೆ ಸಣ್ಣತನ ತೋರುವುದು ಅವರ ಅವಲಕ್ಷಣ. ಇವರ ಕ್ರೇಜ್‌ಗಳನ್ನು ನೋಡಿದರೆ ಎಂಥವರಿಗೂ ದೊಡ್ಡಹೊಟ್ಟೆ ರಾಜನಿಗೆ ಬುದ್ಧಿ ಕಡಿಮೆ ಅನ್ಸುತ್ತೆ. ಮನೆಯಲ್ಲಿ 20ಕ್ಕೂ ಹೆಚ್ಚು ಬಿಎಂಡಬ್ಲ್ಯು ಕಾರ್‌ಗಳಿವೆಯಂತೆ. ಕುದುರೆ ಪಂದ್ಯ ಅಂದರೆ ಪ್ರಾಣವಂತೆ. ಚೆಲ್ ಚೆಲ್ ಹುಡುಗಿಯರ ಪ್ಯಾಷನ್ ಪಾರ್ಟಿಗಳಲ್ಲಿ ಗುಂಡು ಹಾಕೋದರಲ್ಲಿ ಇವ ಮೊದಲಿಗರಂತೆ!
ಆ ಮಲ್ಯ ಹೇಗಾದರೂ ಮಾಡಿಕೊಳ್ಳಲಿ ಸ್ವಾಮಿ. ಇವರೇನು? ಇವರ ಗೈರತ್ತುಗಳೇನು?...ಇದು ಥರವಲ್ಲ.
ಶನಿವಾರ, ಅಕ್ಟೋಬರ್ 4, 2008

ಮನುಷ್ಯ ಪ್ರಾಣಿಯ ತಲೆಯೊಳಗೆ ಬುದ್ಧಿ ಬಿಟ್ಟರೆ ಇನ್ನೇನೂ ಇಲ್ಲ! ಆದರೆ ತನ್ನನ್ನು ತಾನು ಸುರ ಸುಂದರಾಂಗ ಅಂದುಕೊಂಡಿದ್ದಾನೆ. ಇವ ನವಿಲಿಗಿಂತ ಸುಂದರನೆ? ಕತ್ರಿನಾಳಿಗಿಂತ ಕೋತಿ ಸೊಂಟವೇ ಮೇಲು!
ಅಪರೂಪ ಎನಿಸುವ ಪ್ರಾಣಿ ಜೀವಗಳು ಈ ಭೂ ಮಂಡಲದ ಮೇಲಿವೆ. ಕೆಲ ಪ್ರಾಣಿಗಳನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಈ ಬಿಳಿ ಸಿಂಹಗಳನ್ನು (ಚಿತ್ರ) ನೋಡಿ ಎಷ್ಟು ಸುಂದರವಾಗಿವೆ.
ಬಿಳಿ ಸಿಂಹಗಳು ಇಂಗ್ಲೆಂಡಿನಲ್ಲಿವೆ. ಇವುಗಳಿಗಾಗಿ ಇಡೀ ಜಗತ್ತನ್ನು ಜಾಲಾಡಿದರೆ 130 ಕ್ಕಿಂತ ಜಾಸ್ತಿ ಸಿಗಲಾರವು. ಇವು ಬಹಳ ಅಪರೂಪದ ಪ್ರಾಣಿಗಳು. ಇಂಗ್ಲೆಂಡ್ ಇವುಗಳ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದೆ. ಇಂಗ್ಲೆಂಡಿನ ಜನ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
ಚಿತ್ರದಲ್ಲಿರುವ ಎರಡು ಬಿಳಿಸಿಂಹಗಳು ಜನವರಿಯಲ್ಲಿ ಜನಿಸಿದವು. ಅವುಗಳಿಗೆ ತಾರಾ ಮತ್ತು ಜಾರಾ ಎಂದು ಹೆಸರಿಸಲಾಯಿತು.

ಇಷ್ಟರಲ್ಲೇ ಇ- ವೇಸ್ಟ್ ಲಾ!
ನಮ್ಮ ಕೆಲಸ ಕಿತ್ತುಕೊಳ್ಳಲು ಕಂಪ್ಯೂಟರ್ ಬೇಕೆ ಬೇಕು. ಕೆಟ್ಟರೆ ಅದು ಇ- ವೇಸ್ಟ್. ಬರೀ ಕಂಪ್ಯೂಟರ್ ಮಾತ್ರವಲ್ಲ, ಮೊಬೈಲ್: ಇದು ಇದಿಲ್ಲದಿದ್ದರೆ ಜೀವನ ಮುಂದಕ್ಕೇ ಹೋಗುವುದಿಲ್ಲ. ಕರೆನ್ಸಿ ಇಲ್ಲದಿದ್ದರೂ ಪರವಾಗಿಲ್ಲ! ಚೈನಾ ಮೊಬೈಲ್‌ಗಳದ್ದು ಇನ್ನೊಂದು ಕತೆ. ನೋ ರಿಪೇರಿ. ಯೂಸ್ ಅಂಡ್ ಥ್ರೋ! ಟಿವಿ, ರೆಫ್ರಿಜರೇಟರ್, ವಾಷಿಂಗ್‌ಮಷೀನು ಇಂತಹ ವಿದ್ಯುತ್ ಉಪಕರಣಗಳು ಮಾನವ ಬದುಕಿನ ಒಂದು ಅಂಗವೇ ಆಗಿಬಿಟ್ಟಿವೆ. ಕಡೆಗೆ ಅವು ಇ-ಕಸ. ಇದನ್ನು ಸಾಗ ಹಾಕುವುದಾದರೂ ಎಲ್ಲಿಗೆ? ಇ- ತ್ಯಾಜ್ಯಕ್ಕೆ ತಿಪ್ಪೆಗುಂಡಿ ಎಲ್ಲಿದೆ?
ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಯೇ ಒಂದು ಸವಾಲಾಗಿರುವಾಗ ಮಟ್ರೋ ನಗರಗಳಿಗೆ ಇ- ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ ವರ್ಷಕ್ಕೆ 3.3 ಲಕ್ಷ ಟನ್ ಇ- ತ್ಯಾಜ್ಯ ಉತ್ಪತ್ತಿಯಾಗುತ್ತದೆ. 2011ರ ವೇಳಗೆ ಇದರ ಪ್ರಮಾಣ 4.7 ಲಕ್ಷ ಟನ್ ಹೆಚ್ಚಾಗುವುದಾಗಿ ಊಹಿಸಲಾಗಿದೆ. ಶೆ. 50ರಷ್ಟು ಇ-ತ್ಯಾಜ್ಯ ಲೆಕ್ಕಕ್ಕೇ ಸಿಗುತ್ತಿಲ್ಲ.
ಇ- ಕಸ ಬಹಳ ಹಾನಿಕಾರಕವಾದುದು. ಪರಿಸರದ ಅಪಾಯಕರ ಪರಿಣಾಮ ಬೀರುತ್ತದೆ. ವಿದ್ಯುತ್ ಉಪಕರಣಗಳನ್ನು ಸಂಸ್ಕರಿಸುವ ಕಾರ್ಮಿಕರಿಗೆ ವಿವಿಧ ಬಗೆಯ ವ್ಯಾಧಿಗಳು ಕಾಣಿಸಿಕೊಳ್ಳಲಿವೆ.
ಇ- ತ್ಯಾಜ್ಯಕ್ಕೆ ಕಾನೂನಿಲ್ಲ: ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಗೆ ಕಾನೂನುಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸೆಲ್ ಮಾತುಕತೆ ( Bessel convention) ಇದೆ. ಭಾರತದಲ್ಲಿ 1986 ಪರಿಸರ (ಸಂರಕ್ಷಣೆ) ಕಾನೂನಿದೆ. 1989ರ ತ್ಯಾಜ್ಯನಿರ್ವಹಣಾ ನಿಯಮಗಳಿವೆ. ಆದರೆ ಇ- ತ್ಯಾಜ್ಯ ನಿರ್ವಹಣೆಗೆ ಕಾನೂನಿಲ್ಲ. ಇ-ತ್ಯಾಜ್ಯ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಒಂದು ದಶಕದಿಂದೀಚೆಗೆ.
ಇ-ತ್ಯಾಜ್ಯ ಕಾನೂನಿಗೆ ಇದು ಸಕಾಲ: ಬೆಂಗಳೂರಿನಲ್ಲಿ ಸೆ. 25ರಂದು ನಡೆದ `ಪರಿಸರ ಸ್ನೇಹಿ ಇ- ತ್ಯಾಜ್ಯ ನಿರ್ವಹಣೆ ಮಾರ್ಗಸೂಚಿಗಳು' ಎಂಬ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಇ- ತ್ಯಾಜ್ಯ ನಿರ್ವಹಣಗೆ ಜರೂರಾಗಿ ಕಾನೂನಿನ ಅವಶ್ಯಕತೆ ಇದೆ. ಈ ತ್ಯಾಜ್ಯದ ಪರಿಣಾಮ ಪರಿಣಾಮ ಈಗ ಎಲ್ಲರ ಗಮನಕ್ಕೆ ಬರುತ್ತಿದೆ. ಆದ್ದರಿಂದ ಅದರೆ ನಿರ್ವಹಣೆಗೆ ಕಾನೂನು ಜಾರಿಗೊಳಿಸಲು ಇದು ಸಕಾಲ ಎಂಬ ಅಭಿಪ್ರಾಯ ಕೇಳಿಬಂತು.
ಈ ಕಾರ್ಯಗಾರವನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೆಲ ಪರಿಸರ ಎನ್‌ಜಿ ಒಗಳು ಹಾಗೂ ತಯಾರಿಕ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ, ಕಂಪನಿಗಳ, ಎನ್‌ಜಿ ಒಗಳ ತಜ್ಞರುಗಳು ಇ- ತ್ಯಾಜ್ಯದಿಂದ ಉತ್ಪತ್ತಿಯಾಗಿರುವ ಸಮಸ್ಯೆಗಳ ಬಗ್ಗೆ ತಮ್ಮ ವಿಷಯ ಮಂಡಿಸಿದರು. ಎಲ್ಲರೂ ಒಮ್ಮತದಿಂದ ಇ- ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕಾನೂನು ರೂಪಿಸುವುದು ಅಂತಿಮ ಪರಿಹಾರ ಎಂದು ಒಪ್ಪಿಕೊಂಡರು.
ಇ- ತ್ಯಾಜ್ಯ ಸಂಸ್ಕರಣೆಗೆ ವೈಜ್ಞಾನಿಕ ಕ್ರಮ ಅಗತ್ಯವಾಗಿದ್ದು, ವಿದ್ಯುತ್ ಉಪಕರಣಗಳ ಬಳಕೆದಾರರು ಮತ್ತು ಗ್ರಾಹಕರು ಎತ್ತೆಚ್ಚುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಉಪಕರಣಗಳ ಬಳಕೆಯ ಮೇಲೆ ಕೆಲ ನಿಷೇಧ ಹಾಗೂ ಹೊಣೆಗಾರಿಕೆಗಳನ್ನು ಹೇರುವ ಪರಿಪೂರ್ಣ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂಬ ತೀರ್ಮಾನ ಕೈಗೊಳ್ಳಲಾಯಿತು.
ನಿರ್ವಹಣಾ ನಿರ್ದೇಶನಗಳು: ಇ- ತ್ಯಾಜ್ಯ ನಿರ್ವಹಣೆಗೆ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಕೆಲವು ನಿರ್ದೇಶನಗಳನ್ನು ಒಳಗೊಂಡ ಒಂದು ಕಿರು ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ತ್ಯಾಜ್ಯದಿಂದ ಉಂಟಾಗಬಹುದಾದ ಪರಿಣಾಮ ಅವುಗಳ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಇದು ನಿಯಮಗಳ ಆವೃತ್ತಿ ಆಗಿಲ್ಲದ ಕಾರಣ ಇದರಿಂದ ಇ- ತ್ಯಾಜ್ಯ ನಿರ್ವಹಣೆ ಕಷ್ಟ ಆದ್ದರಿಂದ ಕಟ್ಟುನಿಟ್ಟಿನ ಕಾನೂನಿನ ಅವಶ್ಯಕತೆ ಇದೆ.
ರಪ್ತು ರೋಗ: ಇ- ತ್ಯಾಜ್ಯವನ್ನು ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇದು ಬಲುದೊಡ್ಡ ರೋಗ. ಅಕ್ರಮವೂ ಆಗಿದೆ. ಬೆಂಗಳೂರಿನ ಹೊರವಲಯದ ಕೆಲ ಕೆರೆಗಳಲ್ಲಿ ಹೊರ ರಾಜ್ಯಗಳು ತಮ್ಮ ತಮ್ಮ ಇ- ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿರುವುದು ಬೆಳಕಿಗೆ ಬಂದಿದೆ.
ಇದು ಜಾಗತಿಕ ರೋಗವೂ ಹೌದು. ಪಾಶ್ಚಾತ್ಯ ರಾಷ್ಟ್ರಗಳು ಆಫ್ರಿಕನ್ ರಾಷ್ಟ್ರಗಳನ್ನು ತಮ್ಮ ತ್ಯಾಜ್ಯ ಬಿಸಾಡುವ ಡಸ್ಟ್‌ಬಿನ್ ಅಂದುಕೊಂಡಿವೆ. ಭಾರತವೂ ಕೂಡ ಪಾಶ್ಚಾತ್ಯ ರಾಷ್ಟ್ರಗಳ ಇ-ತ್ಯಾಜ್ಯದ ಒಂದು ಡಸ್ಟ್‌ಬಿನ್.
ಈಗೆಲ್ಲಾ ನಗರಗಳು ಎಲೆಕ್ಟ್ರಾನಿಕ್ ಸಿಟಿಗಳಾಗುತ್ತಿವೆ. ಗ್ರೀನ್‌ಸಿಟಿ ಯಾರಿಗೂ ಬೇಡ. ಎಲೆಕ್ಟ್ರಾನಿಕ್ ಸಿಟಿ ಅಂದಮೇಲೆ ಎಲೆಕ್ಟ್ರಾನಿಕ್ ವೇಸ್ಟ್ ಇರಲೇಬೇಕು. ವ್ಯಕ್ತಿ ಇದ್ದ ಮೇಲೆ ವ್ಯರ್ಥ ಇರಲ್ವೆ?
ಶುಕ್ರವಾರ, ಅಕ್ಟೋಬರ್ 3, 2008

ಸ್ವಿಜರ್‌ಲ್ಯಾಂಡ್, ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳ ಮೇಲೆ ನಮಗೇನೋ ಒಂಥರಾ ಕ್ರೇಜ್. ಆಫ್ರಿಕಾ ಅಂದೊಡನೆ ಓ.. ಬ್ಲ್ಯಾಕ್ ಪೀಪಲ್ ಕಂಟ್ರೀಸ್….. ಎಂದು ಮೂಗು ಮುರಿದು ಬಿಡುತ್ತೇವೆ. ಆದರೆ ಆ ಕಡುಕಪ್ಪು ಚರ್ಮದ ಜನರ ದೇಶಗಳ ಹಸಿರು ಸೌಂದರ್ಯವನ್ನು ನಾವು ಎಂದಾದರೂ ನೋಡಬೇಕು ಅಂದುಕೊಂಡಿದ್ದೀವಾ?
ಆಫ್ರಿಕಾ ಖಂಡ ಪ್ರಾಕೃತಿಕ ಸಂಪನ್ಮೂಲದ ಖಣಿ. ಅಲ್ಲಿರುವ ಹಸಿರು ಸಂಪತ್ತು ಬೇರಾವ ದೇಶಗಳಲ್ಲೂ ಇಲ್ಲ. ಆ ಜನರೆಲ್ಲರೂ ಹಸಿರಿನೊಂದಿಗೆ ಬೆಳೆದಿದ್ದಾರೆ. ಹಸಿರು ಆವರ ಜೀವ ಎನ್ನಬಹುದು. ಅವರನ್ನು ನಾವು ಒಂದೇ ಮಾತಿನಲ್ಲಿ `ಬುಡಕಟ್ಟು ಜನರು’ ಎಂದು ಬಿಡುತ್ತೇವೆ. ಪಾಶ್ಚಾತ್ಯ ರಾಷ್ಟ್ರಗಳೂ ಸೇರಿದಂತೆ ಬೇರೆ ದೇಶಗಳ ಜನರು ಆಫ್ರಿಕವನ್ನು ಕಡುಬಡವರ ದೇಶ ಎನ್ನುತ್ತವೆ. ಆ ಖಂಡದ ಹಸಿರು ಶ್ರೀಮಂತಿಕೆ ಬಗ್ಗೆ ಯಾರೂ ಮಾತನಾಡುವುದಿಲ್ಲ.
ಜಗತ್ತಿನ ಒಟ್ಟು ಭೂ ಭಾಗದಲ್ಲಿ ಆಫ್ರಿಕಾದ ಪಾಲು ಶೇ. 6ರಷ್ಟು. ಕೀನ್ಯಾ, ತಾನ್ಸಾನಿಯಾ, ಜಿಂಬಾಬ್ವೆ, ಯುಗಸ್ಲೊವೋಕಿಯಾ, ಉಗಾಂಡ, ನೈರೋಬಿ, ಮಡಗಾಸ್ಕರ್ ಐಸ್ ಲ್ಯಾಂಡ್ ಸೇರಿದಂತೆ 53 ದೇಶಗಳಲ್ಲಿ 922 ಮಿಲಯನ್ ಮಂದಿ ಜೀವನ ನಡೆಸುತ್ತಿದ್ದಾರೆ. ಸೂಡಾನ್ ಆಫ್ರಿಕಾದ ಅತಿದೊಡ್ಡ ದೇಶ. ಸಿಯಚಿಲೀಸ್ ಅತಿ ಚಿಕ್ಕದು.
ಇಲ್ಲಿಯ ಬಹುತೇಕ ಜನರು ಬುಡಕಟ್ಟು ಜನರು. ನಮ್ಮ ಕಣ್ಣಿಗೆ ಅವರು ಅನಾಗರಿಕರಂತೆ ಕಾಣುತ್ತಾರೆ. ಇನ್ನೂ ಗೆಡ್ಡೆ ಗೆಣಸು ತಿಂದುಕೊಂಡು, ಬಟ್ಟೆ ಹಾಕದೆ ಬದುಕುವ ಜನರೂ ಅಲ್ಲಿದ್ದಾರೆ. ಬಹುತೇಕ ದೇಶಗಳು ಮಂಜುಗಡ್ಡೆಯ ಜತೆಯಲ್ಲಿವೆ.
ಆಫ್ರಿಕಾ ದೇಶಗಳ ರಾಜಕೀಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಹಲವು ದೇಶಗಳಲ್ಲಿ ಅಧ್ಯಕ್ಷೀಯ ಸರ್ಕಾರವಿದ್ದರೆ ಕೆಲ ದೇಶಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ. ಹಸಿವೆಯಿಂದ ಸಾಯುವ ಜನರೂ ಅಲ್ಲಿದ್ದಾರೆ. ಹಿಂಸೆ ಇದೆ. ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ.
ಸರ್ಕಾರದ ಕಟ್ಟುಪಾಡುಗಳಿಗೆ ಹೊರತಾದ ಮಂದಿ ಅಲ್ಲಿ ಬಹಳಷ್ಟಿದ್ದಾರೆ. ಅವರು ಹಸಿರು ಮನುಷ್ಯರು. ಹಸಿನೊಂದಿಗೆ ಹುಟ್ಟಿ ಹಸಿರಿನೊಂದಿಗೆ ಕೊನೆಯಾಗುತ್ತಾರೆ. ಅವರೆಲ್ಲರೂ ಹಸಿರು ಪ್ರಜೆಗಳು. ಅವರನ್ನೊಮ್ಮೆ ನೋಡಿಕೊಂಡು ಬರಬೇಕು.


ಭೂ ಮಂಡಲವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವ ಒಂದು ಹೊದಿಕೆ ಓಜೋನ್ ಪದರ. ಸೂರ್ಯನಿಂದ ಹೊರಹೊಮ್ಮುವ ವಿಷಾಯುಕ್ತ ಕಿರಣಗಳನ್ನು ಸಂಸ್ಕರಿಸುವ ಕೆಲಸ ಈ ಹೊದಿಕೆಯದ್ದು.
ಇಂದು ಓಜೋನ್ ಪದರಕ್ಕೆ ಗಂಡಾಂತರ ಒದಗಿದೆ. ಭೂಮಿಯ ಮೇಲೆ ಉತ್ಪತ್ತಿಯಾಗುತ್ತಿರುವ ಹಸಿರು ಮನೆ ಅನಿಲಗಳು ಓಜೋನ್ ಹೊದಿಕೆಯನ್ನು ಉಸಿರುಗಟ್ಟಿಸುತ್ತಿವೆ. ಅಂಟಾರ್ಟಿಕಾ ಓಜೋನ್ ಗುಂಡಿ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ.
ಓಜೋನ್ ಪದರ ರಕ್ಷಣೆಗೆ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ 1987, ಸೆ. 16ರಂದು ವಿವಿಧ ರಾಷ್ಟ್ರಗಳ ನಡುವೆ `ಮಾಂಟ್ರಿಯಲ್ ಪ್ರೊಟೊಕಾಲ್’ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲಾಯಿತು. ಓಜೋನ್ ಪದರಕ್ಕೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗಳನ್ನು ಸದಸ್ಯ ರಾಷ್ಟ್ರಗಳು ಕೈಗೊಳ್ಳಕೂಡದು ಎಂಬ ಬಹುಮತದ ನಿರ್ಣಯವನ್ನು ಅಂದು ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಇದರ ನೆನಪಿಗಾಗಿ ವರ್ಷಂಪ್ರತಿ ಸೆ. 16ರಂದು ಅಂತಾರಾಷ್ಟ್ರೀಯ ಓಜೋನ್ ದಿನಾಚರಣೆ ಆಚರಿಸಲಾಗುವುದು.

ಹೌದು. ಈಗ ಕಸಕ್ಕೆ ಭಾರಿ ಬೇಡಿಕೆ ಬಂದಿದೆ. ಕಸದಿಂದ ರಸ ಉತ್ಪತ್ತಿ ಮಾಡುವ ಎಲ್ಲಾ ಚಿಂತನೆಗಳು ನಡೆಯುತ್ತಿವೆ. ಅಂದುಕೊಂಡಿರುವುದೆಲ್ಲಾ ಸರಿಯಾಗಿ ನಡೆದರೆ ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ `ತ್ಯಾಜ್ಯದಿಂದ ವಿದ್ಯುತ್’ ಘಟಕ ನಿರ್ಮಾಣಗೊಳ್ಳಲಿದೆ. ಈಗಾಗಲೆ ಭಾರತ ಸರ್ಕಾರದ ನವೀಕರಿಸಲಾಗದ ಶಕ್ತಿ ಮೂಲಗಳ ಸಚಿವಾಲಯದ(ಎಂಎನ್‌ಆರ್‌ಐ) ಹಸಿರು ನಿಶಾನೆ ದೊರೆತಿದೆ. ಇಷ್ಟರಲ್ಲೇ ನಿಮ್ಮ ಕಸ ನಿಮ್ಮ ಮನೆಯನ್ನು ಬೆಳಗಲಿದೆ.
ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯವಿಲೇವಾರಿ ಸಮಸ್ಯೆ ಒಂದು ಗಂಭೀರ ಸಮಸ್ಯೆ. ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಅಡ್ಡಿಯಾಗಿರುವ ಸಮಸ್ಯೆ ಇದು. ದಿನಂಪ್ರತಿ ಈ ಊರಲ್ಲಿ ಉತ್ಪತ್ತಿಯಾಗುವ 30.000 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ೃಹತ್ ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಾಂತರ ರೂಪಾಯಿ ಹಣ ಚೆಲ್ಲುತ್ತಿದೆ. ಖಾಸಗೀ ಗುತ್ತಿಗೆದಾರರ ಸಹಾಯದೊಂದಿಗೆ ಅದೇನೇನೋ ಸರ್ಕಸ್ ಮಾಡುತ್ತಿದೆ.
`ಸ್ವಚ್ಛ ಬೆಂಗಳೂರು’ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳ 2500 ಟನ್ ತ್ಯಾಜ್ಯ ವಿಲೇವಾರಿಗೆ 5.40 ಕೋಟಿ ರೂ. ಹಣ ವೆಚ್ಚ ಮಾಡುತ್ತಿದೆ. 1999ರಲ್ಲಿ ರಚಿಸಲಾಗಿರುವ `ಬೆಂಗಳೂರು ಟಾಸ್ಕ್ ಫೋರ್ಸ್’ ಕಸ ವಿಲೆವಾರಿಗೆ ಅವಿರತವಾಗಿ ಪ್ರಯತ್ನಿಸುತ್ತಿದೆ. ಇಡೀ ದೇಶದ ಬೇರೆ ಬೇರೆ ನಗರಗಳಿಗೆ ಹೋಲಿಸಿದರೆ ಕಸ ವಿಲೇವಾರಿ ಕ್ರಮದಲ್ಲಿ ಬೆಂಗಳೂರು ನಗರ ಉತ್ತಮ ಸ್ಥಾನದಲ್ಲಿದೆ ಆದರೂ ಕಸದ ಕಿರಿಕಿರಿ ಇದ್ದೇ ಇದೆ.
ಈ ಪರಿ ತ್ಯಾಜ್ಯವನ್ನು ಬಿಸಾಡುವುದಾದರೂ ಎಲ್ಲಿಗೆ? ಬೇರೆ ರಾಜ್ಯಗಳ ಕಡೆಗೂ ಕಳಿಸುವ ಹಾಗಿಲ್ಲ. ಅದೊಂದು ದೊಡ್ಡ ಕಾನೂನಿನ ಸಮಸ್ಯೆ. ಕಸದ ಪರ್ಯಾಯ ಬಳಕೆಗೆ ಒಂದು ಮೂಲ ಬೇಕೇ ಬೇಕಿತ್ತು. ಅದರ ಹುಡುಕಾಟದಲ್ಲಿ ದೊರೆತ ಒ0ದು ವ್ಯವಸ್ಥೆಯೇ `ತ್ಯಾಜ್ಯದಿಂದ ವಿದ್ಯುತ್’ ಘಟಕ ನಿರ್ಮಾಣ ಯೋಜನೆ.
ಪೌರಕಾರ್ಮಿಕರು ಪ್ರತಿ ಮನೆಯ ಮನೆ ಬಾಗಿಲಿಗೂ ಬಂದು ಕಸ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕಸದ ಆರೋಗ್ಯಗರ ಬಳಕೆಗೆ ಚಿಂತನೆ ನಡೆದಿದೆ. ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಕ್ರಮ ಇತರೆ ವಿದ್ಯುತ್ ತಯಾರಿಕಾ ಮಾದರಿಯಲ್ಲಿಯೇ ಇರುತ್ತದೆ. ಉದ್ದೇಶಿಸಲಾಗಿರುವ ಈ ಯೋಜನೆಯಿಂದ ಎಂಟರಿಂದ ಹತ್ತು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ವಿದ್ಯುತ್ ಘಟಕವು ರಾಜ್ಯಲ್ಲೇ ಅತಿದೊಡ್ಡ ವಿದ್ಯುತ್ ತಯಾರಿಕಾ ಘಟಕವಾಗಲಿದೆ. ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಬಿಬಿಎಂಪಿ ಈ ಘಟನ ನಿರ್ಮಾಣ ಕಾಮಗಾರಿ ಆರಂಭಿಸಲಿದೆ. ಪೂರೈಸಬೇಕಾಗಿರುವ ಕಾನೂನು ಅವಶ್ಯಕತೆಗಳನ್ನು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮ(ಕೆಆರ್‌ಇಡಿಸಿ) ನಿರ್ವಹಿಸಲಿದೆ.
ಖರ್ಚುವೆಚ್ಚ: ಉದ್ದೇಶಿತ ತ್ಯಾಜ್ಯದಿಂದ ವಿದ್ಯುತ್ ಘಟಕ ನಿರ್ಮಾಣಕ್ಕೆ 65 ಕೋಟಿ ರೂ. ಹಣ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡರಿಂದ ಮೂರು ವರ್ಷಗಳಲ್ಲಿ ಘಟಕ ನಿರ್ಮಾಣ ಪೂರ್ಣಗೊಳ್ಳಲಿದೆ. ಭಾರತ ಸರ್ಕಾರದ ನವೀಕರಿಸಲಾಗದ ಶಕ್ತಿ ಮೂಲಗಳ ಸಚಿವಾಲಯವು 10 ಕೋಟಿ ರೂ ಸಬ್ಸಿಡಿ ನೀಡಲು ಒಪ್ಪಿದೆ.
ಸೈಡ್ ಎಫೆಕ್ಟ್: ಏನೇ ಕೆಲಸ ಮಾಡಿದರೂ ಅದರಿಂದ ಅವಗುಣಗಳು ಇದ್ದೇ ಇರುತ್ತವೆ. ತ್ಯಾಜ್ಯದಿಂದ ವಿದ್ಯುತ್ ಯೋಜನೆ ಜಾರಿಯಿಂದ ಉದ್ಭವವಾಗಿರುವ ಸೈಡ್ ಎಫೆಕ್ಟ್ ಅಂದರೆ ಪರಿಸರ ನಾಶ ಸಮಸ್ಯೆ. ತ್ಯಾಜ್ಯವನ್ನು ಉರುವಲಾಗಿ ಬಳಸಿದಾಗ ಅದರ ಶಾಖ ಇಂಧನ ಮೂಲವಾಗುತ್ತದೆ. ತ್ಯಾಜ್ಯವನ್ನು ಸುಡುವಾಗ ಹೊರಹೊಮ್ಮುವ ಹೊಗೆ ಗಾಳಿಯನ್ನು ಮಲಿನಗೊಳಿಸಿದೆ. ಆದ್ದರಿಂದ ಈ ಯೋಜನೆಯ ಮೇಲೆ ಪರಿಸರ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಯೋಜನೆಯ ಮೇಲೆ ವೆಚ್ಚ ಮಾಡಲಾಗುತ್ತಿರುವ ಹಣವನ್ನೇ ತ್ಯಾಜ್ಯ ನಿರ್ವಹಣೆಗೆ ಬಳಸಿದರೆ ಪರಿಸರ ನಾಶ ತಡೆಯಬಹುದು ಎಂಬುದು ಅವರ ವಾದವಾಗಿದೆ.
ಮುಖ್ಯವಾಗಿ ವಾಯುಮಾಲಿನ್ಯ ಘಟಕ ನಿರ್ಮಾಣದಿಂದ ಸುತ್ತಮುತ್ತಲಿನ ಪರಿಸರ ಹಾಳಾಗಲಿದ್ದು ಹೊರ ಹೊಮ್ಮುವ ಹೊಗೆ ಸೇವಿಸುವ ಜನರಿಗೆ ವಿವಿಧ ರೋಗಗಳು ಹರಡುವ ಭೀತಿ ಇದೆ.
ಏನೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಾಗಲೂ ಈ ಪರಿಸರ ಸಮಸ್ಯೆ ಎದುರಾಗುತ್ತದೆ. ಸಹಜವಾಗಿಯೇ ತ್ಯಾಜ್ಯದಿಂದ ವಿದ್ಯುತ್ ಘಟಕ ನಿರ್ಮಾಣ ಯೋಜನೆಯಲ್ಲೂ ಪರಿಸರ ನಾಶ ಸಮಸ್ಯೆ ಎದುರಾಗಿದೆ. ಈ ಘಟಕ ನಿರ್ಮಾಣ ಮಾಡುವುದರಿಂದ ಎರಡು ಲಾಭಗಳಿವೆ. ಒಂದು: ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ. ಎರಡು: ವಿದ್ಯುತ್ ಉತ್ಪಾದನೆ. ಆದ್ದರಿಂದ ಈ ಯೋಜನೆ ಜಾರಿಯಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಘಟಕದ ಚಿಮಣಿಯನ್ನು ಎತ್ತರಕ್ಕೆ ನಿರ್ಮಾಣ ಮಾಡುವುದರಿಂದ ಪರಿಸರ ನಾಶ ಸಮಸ್ಯೆಗೆ ತಡೆಗೋಡೆ ಹಾಕಬಹುದು. ಈಗ ಮೊದಲು ಮಾಡಬೇಕಾದ ಕೆಲಸವೆಂದರೆ ಪರಿಸರ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಚಾಲನೆ ನೀಡುವುದು




