ಸೋಮವಾರ, ಮಾರ್ಚ್ 16, 2009

ಭವಿಷ್ಯದ ಬೆಳಕು
ಅರಮನೆಯಿಂದ ಗುಡಿಸಲಿನವರೆಗೆ ಸೂರ್ಯಶಕ್ತಿ!



ವಿದ್ಯುತ್‌ ಸಮಸ್ಯೆ ಇಂದು ನಿನ್ನೆಯದಲ್ಲ. ಹೆಚ್ಚುತ್ತಿರುವ ವಿದ್ಯುತ್‌ ಮೇಲಿನ ಅವಲಂಬನೆಯಿಂದಾಗಿ ವಿದ್ಯುತ್ತಿನ ಬೇಡಿಕೆಯೂ ಹೆಚ್ಚಾಗಿದೆ. ಶಕ್ತಿಯ ಮೂಲಗಳಿದ್ದರೆ ಮಾತ್ರ ವಿದ್ಯುತ್‌ ದೊರೆಯಲು ಸಾಧ್ಯ. ಆದರೆ ಪ್ರಕೃತಿ ಮೇಲೆ ನಡೆಯುತ್ತಿರುವ ತಡೆಯಿಲ್ಲದ ಹಲ್ಲೆಯಿಂದಾಗಿ ಶಕ್ತಿಯ ಮೂಲಗಳ ಉತ್ಪತ್ತಿ ಕ್ಷೀಣಿಸಿದೆ. ಪರ್ಯಾಯ ಇಂಧನ ಮೂಲಗಳ ಹುಡುಕಾಟ ಹಲವು ದಶಕಗಳಿಂದಲೂ ನಡೆಯುತ್ತಲೇ ಇದೆ. ವಿದೇಶಗಳಿಂದ ಖರೀದಿಯೂ ನಡೆಯುತ್ತಿದೆ. ಆದರೂ ನಮ್ಮ ದೇಶ ತನಗೆ ಬೇಕಾದ ವಿದ್ಯುತ್‌ ಬೇಡಿಕೆ ಈಡೇರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್‌ ಸಮಸ್ಯೆಯಿಂದ ನಮ್ಮ ರಾಜ್ಯವೂ ಹೊರತಾಗಿಲ್ಲ. ಹಳ್ಳಿಗಳ ಪಾಡು ಹಾಗಿರಲಿ, ಬೆಂಗಳೂರು ಮೈಸೂರಿನಂತಹ ನಗರಗಳಲ್ಲೂ ಈಗ ಪೂರ್ಣಾವಧಿ ವಿದ್ಯುತ್‌ ಇಲ್ಲ. ಪ್ರತಿನಿತ್ಯ ಲೋಡ್‌ಶೆಡ್ಡಿಂಗ್‌ ಸಾಮಾನ್ಯ. ಹಳ್ಳಿಗಳಲ್ಲಂತೂ ದಿನಕ್ಕೆ ಏಳು ಗಂಟೆ ವಿದ್ಯುತ್‌ ಸಿಕ್ಕರೆ ಅದೃಷ್ಟ ಎನ್ನುವಂತಾಗಿದೆ.
ಸದ್ಯದ ಸ್ಥಿತಿಯಲ್ಲಿ ವಿದ್ಯುತ್‌ ಸಮಸ್ಯೆ ಎದುರಿಸಲು ಸೌರಶಕ್ತಿ ಬಳಕೆಯೇ ಸರಿಯಾದ ಮಾರ್ಗ. ಭವಿಷ್ಯದ ಶಕ್ತಿ ಬೇಡಿಕೆಯನ್ನು ನೀಗಿಸಲು ಸೂರ್ಯಶಕ್ತಿ ವರದಾನವಾಗುತ್ತದೆ ಎಂಬುದನ್ನು ತಜ್ಞರು ಒಮ್ಮತದಿಂದ ಒಪ್ಪುತ್ತಾರೆ. ಪರಿಸರಕ್ಕೆ ಹಾನಿಯಿಲ್ಲದೆ ಅವಶ್ಯವಿರುವ ಇಂಧನವನ್ನು ಸೂರ್ಯಶಕ್ತಿ ಮಾತ್ರ ನೀಡಬಲ್ಲದು. ಭಾರತದಲ್ಲಿ ಸೂರ್ಯಶಕ್ತಿಯ ಬಳಕೆ ಕುರಿತಂತೆ ಹೆಚ್ಚು ಮನ್ನಣೆ ದೊರೆತಿದೆ. ಸೌರಶಕ್ತಿ ಬಳಕೆಗೆ ಸಂಬಂಧಪಟ್ಟಂತೆ ಭಾರತದಲ್ಲಿಯೇ ಹೆಚ್ಚು ಸಂಶೋಧನೆಗಳು ನಡೆದಿವೆ. ಕಳೆದ ಒಂದು ದಶಕದಲ್ಲಿ 13 ಲಕ್ಷ ಕುಟುಂಬಗಳು ಸೂರ್ಯಶಕ್ತಿಯ ಸಂಪರ್ಕ ಪಡೆದಿವೆ. ಭಾರತದ ಸೂರ್ಯಶಕ್ತಿ ಬಳಕೆಯ ಪ್ರಯತ್ನ ಕುರಿತು ಬೇರೆ ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಿವೆ.
ಭಾರತದಲ್ಲಿ ಹೊಸ ಶಕ್ತಿಯ ಸಂಶೋಧನೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಸಚಿವಾಲಯವನ್ನೇ ರಚಿಸಲಾಗಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ 1996ರಲ್ಲಿ ಪೂರ್ಣ ಪ್ರಮಾಣದ ಇಂಧನ ಸಚಿವಾಲಯವಾಗಿ ಅಸ್ತಿತ್ವಕ್ಕೆ ಬಂತು. ಈ ಸಚಿವಾಲಯವು ಸೌರಶಕ್ತಿ ಸಂಶೋಧನೆ ಹಾಗೂ ಬಳಕೆಗೆ ಹೆಚ್ಚು ಗಮನ ನೀಡುತ್ತಿದ್ದು ಸೂರ್ಯಶಕ್ತಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿದೆ.
ಇಂಧನ ಸ್ವಾವಲಂಬನೆ: ಸ್ವಾವಲಂಬಿಯಾಗಿ ಪ್ರತಿವ್ಯಕ್ತಿ ತನ್ನ ಅವಶ್ಯಕತೆಗೆ ಬೇಕಾದ ಇಂಧನವನ್ನು ಹುಟ್ಟಿಸಿಕೊಳ್ಳಬಹುದಾದ ಒಂದೇ ಒಂದು ಇಂಧನವೆಂದರೆ ಸೌರಶಕ್ತಿ. ಒಂದು ದಿನದ ಸೂರ್ಯನ ಶಕ್ತಿ ಒಬ್ಬ ವ್ಯಕ್ತಿಯ ಪೂರ್ತಿ ಜೀವಿತಾವಧಿಗೆ ಬೇಕಾದ ಇಂಧನ ಅವಶ್ಯಕತೆಯನ್ನು ಪೂರೈಸಬಲ್ಲದು. ತಮಗೆ ಬೇಕಾದ ಸೂರ್ಯಶಕ್ತಿಯನ್ನು ಪ್ರತಿಯೊಬ್ಬ ವ್ಯಕ್ತಿ ಸ್ವತಂತ್ರವಾಗಿ ಪಡೆಯಬಹುದು. ಸೌರಶಕ್ತಿಯನ್ನು ಮೊದಲು ಶಾಖಕ್ಕಾಗಿ, ಬೆಳಕಿಗಾಗಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಸೋಲಾರ್‌ ಶಕ್ತಿ ಬಳಕೆಯ ಹಲವು ಉಪಕರಣಗಳು ಬಂದಿವೆ. ಸೋಲಾರ್‌ ಕುಕ್ಕರ್‌ನಿಂದ ಅಡುಗೆ ಮಾಡಬಹುದು, ಸೋಲಾರ್‌ ಐರನ್‌ ಬಾಕ್ಸ್‌ ಇದೆ. ಸೋಲಾರ್‌ ವಾಹನಗಳೂ ಬಂದಿವೆ.
ಸೋಲಾರ್‌ ತಂತ್ರಜ್ಞಾನ: ಸೋಲಾರ್‌ ತಂತ್ರಜ್ಞಾನ ಇಂದು ವಿಶ್ವಮನ್ನಣೆ ಪಡೆದುಕೊಳ್ಳುತ್ತಿದೆ. ಈ ತಂತ್ರಜ್ಞಾನದ ಒಂದು ವಿಶೇಷವೆಂದರೆ ಸೌರಶಕ್ತಿಯ ಸಂಪರ್ಕವನ್ನು ಯಾರೇ ತೆಗೆದುಕೊಂಡರೂ ಇಡೀ ತಂತ್ರಜ್ಞಾನ ಅವರದಾಗುತ್ತದೆ. ಅದೊಂದು ಉಪಕರಣ. ಯಾರು ಬೇಕಾದರೂ ಅದರ ಸಂಪರ್ಕ ತೆಗೆದುಕೊಳ್ಳಬಹುದು. ಬೇಕೆಂದಾಗ ಉಪಯೋಗಿಸಬಹುದು. ತಿಂಗಳ ಶುಲ್ಕ ಪಾವತಿಸುವ ತಲೆ ನೋವಿಲ್ಲ. ಅದಕ್ಕೆ ವಿದ್ಯುತ್‌ ಸಂಪರ್ಕ ಬೇಕಾಗಿಲ್ಲ. ಒಮ್ಮೆ ಅದನ್ನು ಮನೆಗೆ ಕೊಂಡು ತಂದರೆ ಆ ಇಡೀ ತಂತ್ರಜ್ಞಾನ ಅವರ ಸ್ವಂತವಾಗುತ್ತದೆ.
ಸೌರಶಕ್ತಿ ಶಾಶ್ವತವಾದುದು. ಸೌರತಂತ್ರಜ್ಞಾನ ಇರುವವರೆಗೂ ಅದರ ಉಪಯೋಗ ಪಡೆಯಬಹುದು. ಸೌರಶಕ್ತಿ ಶ್ರೀಮಂತರ ಸ್ವತ್ತಲ್ಲ. ಅರಮನೆಯಿಂದ ಗುಡಿಸಲಿನವರೆಗೆ ಯಾರು ಬೇಕಾದರೂ ಸೌರಶಕ್ತಿ ಸಂಪರ್ಕ ತೆಗೆದುಕೊಳ್ಳಬಹುದು. ಒಮ್ಮೆ ಒಂದಷ್ಟು ಬಂಡವಾಳ ಹಾಕಿದರೆ ಮತ್ತೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸೂರ್ಯನ ಕಿರಣ ಬೀಳುವ ಸೂಕ್ತವಾದ ಜಾಗ ನೋಡಿ ಉಪಕರಣವನ್ನು ಅಳವಡಿಸಿದರೆ ಮುಗಿಯಿತು. ನಮ್ಮ ಮನೆಯ ಮೇಲೆಯೇ ವಿದ್ಯುತ್‌ ಇರುತ್ತದೆ. ಕರೆಂಟ್‌ ಬರುವಿಕೆಗಾಗಿ ಕಾಯಬೇಕಾದ ಪರಿಸ್ಥಿತಿ ಇಲ್ಲ. ಬೇಕಾದಾಗ ಬೆಳಕು ಪಡೆಯಬಹುದು.
ನಿರ್ವಹಣೆ ಬಹಳ ಸರಳ: ಸೌರಶಕ್ತಿ ಪ್ರಕೃತಿದತ್ತವಾದುದು. ಅದರ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿಲ್ಲ. ಆದರೆ ಸೌರ ತಂತ್ರಜ್ಞಾನದ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿದೆ. ತಂತ್ರಜ್ಞಾನವನ್ನು ಮನೆಗೆ ಅಳವಡಿಸಿಕೊಂಡ ನಂತರ ಅದರ ಯಂತ್ರವನ್ನು ನಿರ್ವಹಿಸಬೇಕಾಗುತ್ತದೆ. ನಿರ್ವಹಣೆ ಕಷ್ಟವೇನಲ್ಲ. ತಂತ್ರಜ್ಞರೇ ಬೇಕೆಂದಿಲ್ಲ. ಮನೆಯ ಮಕ್ಕಳು, ಮಹಿಳೆಯರೂ ಕೂಡ ನಿರ್ವಹಿಸಬಹುದು. ಯಂತ್ರದಲ್ಲಿ ಒಂದು ಪ್ಯಾನೆಲ್‌ ಇರುತ್ತದೆ. ಅದನ್ನು ಬಹಳ ಸುಲಭವಾಗಿ ತೆಗೆಯಬಹುದು, ಮತ್ತೆ ಹಾಕಬಹುದು. ಒಂದು ಬ್ಯಾಟರಿ ಇರುತ್ತದೆ. ಅದನ್ನು ಮುಟ್ಟಿದರೆ ಶಾಕ್‌ ಹೊಡೆಯುವುದಿಲ್ಲ. ಯಾರೂ ಬೇಕಾದರೂ ಬಳಸಬಹುದು.
ಆರ್‌ಸಿಸಿ ಬಿಲ್ಡಿಂಗ್‌ಗಳಿಗೆ ಮಾತ್ರ ಸೌರಶಕ್ತಿ ಸಂಪರ್ಕ ಪಡೆಯಬಹುದೆಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಅದು ತಪ್ಪು. ಎಲ್ಲಾ ತರಹದ ಮನೆಗಳೂ ಸೌರಶಕ್ತಿ ಸಂಪರ್ಕ ಪಡೆಯಬಹುದು. ಹೆಂಚಿನ ಮನೆಗಳು ಹಾಗೂ ಹುಲ್ಲು ಹಾಸಿನ ಗುಡಿಸಲುಗಳೂ ಕೂಡ ಸೂರ್ಯಶಕ್ತಿ ಸಂಪರ್ಕ ಹೊಂದಬಹುದು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯಿಂದ ಮನೆಗೆ ಅಂತರ ಜಾಸ್ತಿ ಇರುವುದರಿಂದ ಸೂರ್ಯ ಕಿರಣಗಳು ನೇರವಾಗಿ ಬೀಳುವುದರಿಂದ ಹಳ್ಳಿಗಳಲ್ಲಿ ಸೌರಶಕ್ತಿಯನ್ನು ಹೆಚ್ಚಾಗಿ ಪಡೆಯಬಹುದು.
ಸಮಯ ಪ್ರಜ್ಞೆ: ಸೌರಶಕ್ತಿಯಿಂದ ಒಂದು ಮಹತ್ವದ ಉಪಯೋಗವೆಂದರೆ ಸೌರಶಕ್ತಿ ಸಮಯ ಪ್ರಜ್ಞೆ ರೂಢಿಸಿಕೊಳ್ಳುವುದು. ಸೂರ್ಯಶಕ್ತಿಯನ್ನು ಒಂದು ನಿಗದಿತ ಅವಧಿಯ ಅಂತರದಲ್ಲಿ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯವರೆಗೂ ಸೂರ್ಯನ ಕಿರಣಗಳಲ್ಲಿ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಆ ಅವಧಿಯಲ್ಲಿಯೇ ಸೋಲಾರ್‌ ಶಕ್ತಿಯನ್ನು ಪಡೆಯಬೇಕು. ಇದರಿಂದಾಗಿ ಸಮಯ ಪ್ರಜ್ಞೆ ಮೂಡಲು ಸಹಾಯಕವಾಗುತ್ತದೆ.
ಪರಿಸರ ಮತ್ತು ಸೂರ್ಯಶಕ್ತಿ: ಸೌರಶಕ್ತಿಯನ್ನು ಮಿತಿ ಇಲ್ಲದಷ್ಟು ಪಡೆಯಬಹುದು. ಪರಿಸರ ಹಾನಿ ಇಲ್ಲದ ಒಂದೇ ಒಂದು ಇಂಧನ ಮೂಲವೆಂದರೆ ಸೌರಶಕ್ತಿ. ಇದು ಪರಿಸರ ಸ್ನೇಹಿ ಇಂಧನ. ಕಂಟಕಪ್ರಾಯವಾಗಿರುವ ಇಂಧನ ಮೂಲಗಳಿಂದ ಪರಿಸರವನ್ನು ರಕ್ಷಿಸಬೇಕಾದರೆ ಅತ್ಯಂತ ಜರೂರಾಗಿ ಸೌರಶಕ್ತಿ ಬಳಸಬೇಕಾಗಿದೆ.
ಹಲವು ದಶಕಗಳ ಹಿಂದೆಯೇ ಸೌರಶಕ್ತಿ ಬಳಕೆಯ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಆದರೆ ನಮ್ಮಲ್ಲಿ ಸೌರಶಕ್ತಿಯ ಬಗ್ಗೆ ಜನರಲ್ಲಿ ಅರಿವು ಬಹಳ ಕಡಿಮೆ. ಸರ್ಕಾರಗಳೂ ಕೂಡ ಜನರಲ್ಲಿ ಸೌರಶಕ್ತಿ ಕುರಿತು ಜಾಗೃತಿ ಮೂಡಿಸುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸದ್ಯಕ್ಕೆ ಅತ್ಯಂತ ಮಹತ್ವದ ಸೌರಶಕ್ತಿ ಅಭಿಯಾನ ನಡೆಯಬೇಕಿದೆ.
ಕೆಲವರು ಸೌರಶಕ್ತಿಯನ್ನು ಬಹಳ ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಸಂಪರ್ಕ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಬಿಸಿಲು ಬಂದಾಗ ಮಾತ್ರ ಅದರ ಉಪಯೋಗ ಎಂದು ವ್ಯಂಗ್ಯ ಮಾಡುತ್ತಾರೆ. ಆದರೆ ಸೂರ್ಯ ಅಸ್ತಿತ್ವದಲ್ಲಿ ಇರುವ ತನಕ ಅವನ ಕಿರಣಗಳು ನಮ್ಮ ಮೈ ಸೋಕುತ್ತದೆ ಎಂಬುದನ್ನು ಅವರು ಮರೆತಿದ್ದಾರೆ. ಬಿದ್ದ ಸೂರ್ಯಶಕ್ತಿಯನ್ನು ವ್ಯರ್ಥವಾಗಲು ಬಿಡದೆ ಅದನ್ನು ಹಿಡಿದಿಟ್ಟುಕೊಂಡರೆ ಅದನ್ನು ಬೇಕೆಂದಾಗ ಬಳಸಬಹುದಲ್ಲವೆ?

ಬುಧವಾರ, ಫೆಬ್ರವರಿ 11, 2009




ಪರಿಸರ ಕರತಾಡನ!

ಆ 24 ಗಂಟೆಗಳಲ್ಲಿ ಇಡೀ ದೇಶಾದ್ಯಂತ ಮ್ಯಾಜಿಕ್‌ ನಡೆದು ಹೋಯಿತು. ಸುದ್ದಿ ಪ್ರಸಾರಕ್ಕಾಗಿ ಸ್ಪರ್ಧೆಗಿಳಿಯುವ ಖಾಸಗೀ ಸುದ್ದಿವಾಹಿನಿಯೊಂದು ದೇಶದ ಆಗು ಹೋಗುಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಟ್ಟಿತ್ತು. 24 ಗಂಟೆಗಳ ಪರಿಸರ ಆಂದೋಲನವನ್ನು ಪ್ರಸಾರ ಮಾಡುವ ಮೂಲಕ `ದೇಶದಲ್ಲೇ ಪ್ರಥಮ' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಾಷ್ಟ್ರದ ಜನರು ಈ ಆಂದೋಲನಕ್ಕೆ ಒಕ್ಕೊರೊಲಿನಿಂದ ಸ್ಪಂದಿಸಿದರು. ಇದೊಂದು ಪರಿಸರ ಕರತಾಡನವೇ ಸರಿ!
ಅದು ಎನ್‌ಡಿ ಟಿವಿ ಸುದ್ದಿವಾಹಿನಿ. ಅದು ಗ್ರೀನಥಾನ್‌(ಹಸಿರು ಓಟ) ಕಾರ್ಯಕ್ರಮ. ಶನಿವಾರ (ಫೆ. 7) ಸಂಜೆ 7 ಗಂಟೆಯಿಂದ ಭಾನುವಾರ ಸಂಜೆ 7 ಗಂಟೆಯವರೆಗೆ ಎಲ್ಲಾ ಎನ್‌.ಡಿ. ಟಿವಿ ವಾಹಿನಿಗಳಲ್ಲಿ ನಡೆದ ಗ್ರೀನಥಾನ್‌ ಕಾರ್ಯಕ್ರಮ ದಾಖಲೆಗೆ ಯೋಗ್ಯವಾಯಿತು. ಸದಾ ಟೀಕೆ ಟಿಪ್ಪಣಿಗಳಿಗೆ ಒಳಗಾಗುವ ಟಿವಿ ಮಾಧ್ಯಮಗಳಿಗೆ ಈ ಘಟನೆ ಒಂದು ಮಾದರಿ. ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ವ್ಯಕ್ತಿಗಳು, ಪರಿಸರವಾದಿಗಳು, ಚಲನಚಿತ್ರ ಮಂದಿ ಎಲ್ಲರೂ ಇದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಇಡೀ ಬಾಲಿವುಡ್‌ ಎನ್‌.ಡಿ. ಟಿವಿಯ ಜತೆಗಿತ್ತು.
ನಗರಗಳು ಬೆಳೆಯುತ್ತಿವೆ. ಹಸಿರುಮಯ ವಾತಾವರಣ ಮಾಯವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮೇಲಿನ ಹಲ್ಲೆ ನಿತ್ಯ ನಿರಂತರವಾಗಿದೆ. ಸರ್ಕಾರಗಳ ಅಭಿವೃದ್ಧಿ ಯೋಜನೆಗಳಲ್ಲಿ ಪರಿಸರ ಕಾಳಜಿ ಇಲ್ಲದಾಗಿದೆ. ಮೆಟ್ರೋ ನಗರಗಳಲ್ಲಿ ಕೊಳಚೆ ಬಡಾವಣೆಗಳು ತಲೆ ಎತ್ತುತ್ತಿವೆ. ಕೊಳಚೆ ನಿವಾಸಿಗಳು ಪರಿಸರ ಏರುಪೇರುಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಮುಂಬೈ ನಗರದಲ್ಲಿ ಅತೀವೃಷ್ಟಿ ಸಂಭವಿಸಿದಾಗ ಕೊಳಚೆ ನಿವಾಸಿಗಳ ಜೀವನ ಇಕ್ಕಟ್ಟಿಗೆ ಸಿಲುಕುತ್ತದೆ. ಮಳೆ ಸುರಿಯುವಾಗ ನೋಡ ನೋಡುತ್ತಿದ್ದಂತೆ ಕೊಳಚೆ ನಿವಾಸಿಗಳು ಚೆರಂಡಿಯಲ್ಲಿ ಕೊಚ್ಚಿಹೋಗುವ ಘಟನೆಗಳು ಮುಂಬೈನಲ್ಲಿ ಲೆಕ್ಕವಿಲ್ಲ. ಬೆಂಗಳೂರೇನು ಕಡಿಮೆಯೆ? ಪಕೃತಿ ಮೇಲಿನ ಹಲ್ಲೆಯ ಪ್ರಥಮ ಕೀರ್ತಿ ಬೆಂಗಳೂರಿಗೇ ಸಲ್ಲಬೇಕು!
ಜಾಗೃತಿಗಾಗಿ ಗ್ರೀನಥಾನ್‌: `ನಾಳಿನ ಒಳಿತಿಗಾಗಿ ಜಾಗೃತಿ' ಎಂಬ ಉದ್ದೇಶದಿಂದ ಎನ್‌ಡಿ ಟಿವಿ ಗ್ರೀನಥಾನ್‌ ಕಾರ್ಯಕ್ರಮ ನಡೆಸಿತು. ರಾಷ್ಟ್ರದ ಜನರಲ್ಲಿ ಪರಿಸರ ಕಾಳಜಿ ಮೂಡಿಸಲು 24 ಗಂಟೆಗಳ ಕಾಲ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಏಕಕಾಲದಲ್ಲಿ ಅಭಿಯಾನ ನಡೆದವು. ಸ್ವಚ್ಛ ಮುಂಬೈ (ಮುಂಬೈ ಕ್ಲಿನಥಾನ್‌)ಅಭಿಯಾನದಡಿಯಲ್ಲಿ ಕಲುಷಿತವಾಗಿರುವ 124 ಕಿಮೀ ಉದ್ದದ ಸಮುದ್ರ ತೀರದ ಸ್ಪಚ್ಛತೆಗಾಗಿ ಆಂದೋಲನ ನಡೆಯಿತು. ಇದರಲ್ಲಿ ಮುಂಬೈನ ಹಲವು ಎನ್‌ಜಿಗಳು ಕೈಜೋಡಿಸಿದ್ದವು.
`ಯಮುನಾ ರಕ್ಷಿಸಿ' ಅಭಿಯಾನದಡಿಯಲ್ಲಿ ಯಮುನಾ ನದಿ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ಹಿಮಾಲಯದಲ್ಲಿ ಜನ್ಮಿಸುವ ಯಮುನಾ ನದಿ ರಾಷ್ಟ್ರದ ಅತೀ ಕಲುಷಿತ ನದಿಗಳಲ್ಲೊಂದು. ದೆಹಲಿ ನಗರಕ್ಕೆ ಶೇ. 70ರಷ್ಟು ಕುಡಿಯುವ ನೀರನ್ನು ಈ ನದಿಯಿಂದ ಬಳಸಲಾಗುತ್ತದೆ. ಕೆಟ್ಟಿರುವ ಯಮುನೆಯ ಉಳಿವಿಗಾಗಿ ಎನ್‌.ಡಿ. ಟಿವಿ ಟಯೋಟಾ ಕಂಪನಿಯ ನೆರವಿನೊಂದಿಗೆ `ಸೇವ್‌ ಯಮುನಾ' ಅಭಿಯಾನ ನಡೆಸಿತು.
ಎಲ್ಲವೂ ಬೆಳಕಿಗಾಗಿ: ಮುಸ್ಸಂಜೆ ಆಗುತ್ತಿದ್ದಂತೆ ಸಾವಿರಾರು ಜನರ ಮನೆ ಮನಗಳಲ್ಲಿ ಕಗ್ಗತ್ತಲು ಆವರಿಸಿಕೊಳ್ಳತ್ತದೆ. ದೇಶ ದೊಡ್ಡದಾಗಿದೆ. ಆಧುನೀಕತೆ ಎಲ್ಲೆಲ್ಲೂ ಇದೆ. ಆದರೂ ಬೆಳಕನ್ನೇ ಕಾಣದ ಅದೆಷ್ಟೋ ಕುಟುಂಬಗಳು ನಮ್ಮ ನಡುವೆ ಇವೆ. ವಿದ್ಯುತ್ತನ್ನೇ ಕಾಣದೆ ಸೀಮೆಎಣ್ಣೆ ದೀಪಗಳ ನಡುವೆ ಕಾಲ ಕಳೆಯುತ್ತಿರುವ ಬಿಲಿಯನ್‌ಗಟ್ಟಲೆ ಹಳ್ಳಿಗರ ಬದುಕಿನಲ್ಲಿ ಬೆಳಕು ಮೂಡಿಸುವ ಮುಖ್ಯ ಉದ್ದೇಶವನ್ನು ಗ್ರೀನಥಾನ್‌ ಹೊಂದಿತ್ತು ಎಂಬುದು ವಿಶೇಷ.
ಈ ಬೆಳಕಿನ ಯೋಜನೆಯನ್ನು ರೂಪಿಸಿದವರು ತೆರಿ(ಇಂದನ ಮೂಲ ಸಂಶೋಧನಾ ಸಂಸ್ಥೆ)ಯ ಅಧ್ಯಕ್ಷ ರಾಜೇಂದ್ರ ಪಚೌರಿ. ಗ್ಲೊಬಲ್‌ ವಾರ್ಮಿಂಗ್‌ನ ಅಪಾಯದ ವಿರುದ್ಧ ಹೋರಾಡುವಂತೆ ವಿಶ್ವಕ್ಕೆ ಕರೆ ಕೊಟ್ಟ ಪಚೌರಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರು.
ಬೆಳಕಿಗಾಗಿ ನಿಧಿ: ತೆರಿಯ ಬೆಳಕಿನ ಯೋಜನೆಗಾಗಿ ನಿಧಿ ಮೂಲಕ ಹಣ ಸಂಗ್ರಹಿಸುವ ಅಭಿಯಾನ ಎನ್‌ಡಿ ಟಿವಿ ಗ್ರೀನಥಾನ್‌ನ ಪ್ರಮುಖ ಅಂಗ. ವಿದ್ಯುತ್‌ ಸೌಲಭ್ಯ ಇಲ್ಲದ ಭಾರತದ ಹಳ್ಳಿಗಳಿಗೆ ಸೌರಶಕ್ತಿ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಪರಿಸರ ಕಾಳಜಿವುಳ್ಳವರಿಂದ ನಿಧಿ ಸಂಗ್ರಹ ಕಾರ್ಯಕ್ಕೆ ಎನ್‌ಡಿ ಟಿವಿ ಚಾಲನೆ ನೀಡಿತು. ಹಣ ಸಹಾಯ ಮಾಡುವವರು ತೆರಿ ಸಂಸ್ಥೆಗೆ ಡಿಡಿ ಕಳಿಸುವ ವ್ಯವಸ್ಥೆ ಮಾಡಿತ್ತು. ಎಸ್‌ಎಂಎಸ್‌ ಹಾಗೂ ಆನ್‌ಲೈನ್‌ ಮೂಲಕವೂ ಹಣ ಸಹಾಯ ಮಾಡುವ ವ್ಯವಸ್ಥೆ ಇತ್ತು. ಅದಕ್ಕಾಗಿ ಎನ್‌ಡಿ ಟಿವಿ ಕಾಲ್‌ಸೆಂಟರ್‌ವೊಂದನ್ನು ತೆರೆದಿತ್ತು.
24 ಗಂಟೆಗಳಲ್ಲಿ ಎನ್‌ಡಿ ಟಿವಿ ಬಹುಕೋಟಿ ಸಹಾಯ ಹಣ ಸಂಗ್ರಹಿಸಿತು. ಪರಿಸರ ಕಾಳಜಿಯುಳ್ಳ ಲಕ್ಷಾಂತರ ಮಂದಿ ತಮ್ಮ ಸಹಾಯ ಅಸ್ತವನ್ನು ಧಾರಾಳಾವಾಗಿ ಚಾಚಿದರು.
ಹಸಿರು ಗೀತೆ: ಗ್ರೀನಥಾನ್‌ ಕಾರ್ಯಕ್ರಮದ ಉದ್ದಕ್ಕೂ ಗ್ರೀನ್‌ ಅಂಥೆಮ್‌(ಹಸಿರುಗೀತೆ) ಮಹತ್ವ ಪಡೆದುಕೊಂಡಿತ್ತು. ಪರಿಸರ ಜಾಗೃತಿಗಾಗಿ ರಾಷ್ಟ್ರಗೀತೆಯಷ್ಟೇ ಮಹತ್ವವನ್ನು ಈ ಗೀತೆಗೆ ನೀಡಲಾಗಿತ್ತು.
ಬೆಂಗಳೂರಲ್ಲೂ ನಡೆಯಬೇಕಿದೆ ಹಸಿರು ನಡಿಗೆ: ಬೆಂಗಳೂರಿನಲ್ಲಿ ಪರಿಸರ ಸಮಸ್ಯೆಗಳು ಒಂದಾ ಎರಡಾ....ರಸ್ತೆ ಅಗಲೀಕರಣ, ಮರಗಳ ನೆಲಸಮ, ಟ್ರಾಫಿಕ್‌, ರಿಯಲ್‌ ಎಸ್ಟೇಟ್‌ ದಂಧೆ, ಕೆರೆ ಒತ್ತುವರಿ, ಚೆರಂಡಿ ಸಮಸ್ಯೆ, ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಮುಚ್ಚದ ಕೊಳವೆ ಬಾವಿಗಳು, ಅಗೆತ, ಧೂಳು.....ಪಟ್ಟಿ ಉದ್ದವಾಗಿ ಬೆಳೆಯುತ್ತದೆ!
ಬೆಂಗಳೂರಿನ ಪರಿಸರ ಸಮಸ್ಯೆ ನಿವಾರಣೆಗೆ ಎನ್‌ಡಿ ಟಿವಿ ಗ್ರೀನಥಾನ್‌ನಂತಹ ಪರಿಸರ ಆಂದೋಲನಗಳ ಅಗತ್ಯವಿದೆ. ರೋಗಿಗಳಿಗೆ ಈ ಊರು ನರಕಯಾತನೆಯಾಗಿದೆ. ಶ್ರೀಸಾಮಾನ್ಯನಿಗೆ ಬೆಂಗಳೂರು ಅಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಭೂಮಿ ದಂಧೆಯ ವಸ್ತುವಾಗಿ ರೌಡಿಸಂಗೆ ವೇದಿಕೆಯಾಗಿದೆ. ಇಷ್ಟೇ ಅಲ್ಲ, ಅಪರಾಧ ಪ್ರಮಾಣ ಏರುಗತಿಯಲ್ಲಿದೆ. ಪ್ರತಿನಿತ್ಯ ಕೊಲೆ ಸುಲಿಗೆಗಳು ಸಾಮಾನ್ಯವಾಗಿವೆ. ಹಿರಿಯರ ಮೇಲೆ ಕಿರುಕುಳ ಪ್ರಕರಣಗಳು ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಸಮಸ್ಯೆಗಳಿಂದ ಹೊರ ಬರಲು ಜನಜಾಗೃತಿ ಒಂದೇ ಪರಿಹಾರ.
ಬೆಂಗಳೂರಿನ ೃಹತ್‌ ಪಾಲಿಕೆ `ಮರ ಕಡಿದರೆ ರಸ್ತೆ ಅಭಿವೃದ್ಧಿ' ಎಂಬ ಮಂತ್ರವನ್ನು ಬಿಟ್ಟು ಸಸ್ಯಕಾಂತ್ರಿ ಕೈಗೊಳ್ಳುವ ಅಗತ್ಯತೆ ಇದೆ.
ತಿಮ್ಮಕ್ಕ ಸ್ಮೃತಿ: ಕರ್ನಾಟಕದಲ್ಲಿ ಪರಿಸರ ಕಾಳಜಿ ವಿಷಯ ಬಂದ ಕೂಡಲೆ ಸಾಲುಮರದ ತಿಮ್ಮಕ್ಕ ನೆನಪಾಗುತ್ತಾರೆ. ತಮ್ಮ ಮುಗ್ಧ ಪರಿಸರ ಕಾಳಜಿಯಿಂದಾಗಿ ವಿಶ್ವಪ್ರಸಿದ್ಧರಾದ ಮಹಾಮಾತೆ ಆಕೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿಯವರಾದ ಇವರು ನಡೆದಾಡುವ ವಿಶ್ವಕೋಶವಾಗಿದ್ದಾರೆ. ತಮ್ಮ ಸಾಲು ಮರ ಕಲ್ಪನೆಯನ್ನು ಸಾಕಾರಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಹಸಿರಿನ ಮಹತ್ವವನ್ನು ಸಾರಿದವರು. ಅವರು ಮಾತನಾಡಲಿಲ್ಲ. ಮಾಡಿ ತೋರಿಸಿದರು. ಮರ ನೆಡುತ್ತಾ ನೆಡುತ್ತಾ ಮನೆ ಮಾತಾದರು. ವಿದೇಶಿ ವಿವಿಗಳಲ್ಲಿ ತಿಮ್ಮಕ್ಕರ ಬಗ್ಗೆ ಸಂಶೋಧನೆ ಕೇಂದ್ರಗಳೇ ಇವೆ. ಈ ವಿಷಯ ತಿಮ್ಮಕ್ಕರಿಗೆ ಗೊತ್ತೊ ಗೊತ್ತಿಲ್ಲವೋ!
ಸುಂದರ ಲಾಲ್‌ ಬಹುಗುಣ ಕೂಡ ಪರಿಸರ ಜಾಗೃತಿಯ ಮಹತ್ವವನ್ನು ಹಲವು ದಶಕಗಳಿಂದ ಒತ್ತಿ ಹೇಳುತ್ತಾ ಬಂದಿದ್ದಾರೆ. ಅವರ ಅಪ್ಪಿಕೋ ಚಳವಳಿಗೆ ಕಳೆದ ವರ್ಷ 25 ವಸಂತ ತುಂಬಿತು. ಅವರ ಪರಿಸರ ಅಭಿಯಾನಗಳು ನಿರಂತರವಾಗಿ ಸಾಗಿವೆ. ಶಾಲಾ ಮಕ್ಕಳಲ್ಲಿ ಮೊದಲು ಪರಿಸರ ಕಾಳಜಿ ಮೂಡಿಸಬೇಕು ಎನ್ನುವ ಅವರ ನಿರ್ಧಾರಕ್ಕೆ ನಮ್ಮ ಸರ್ಕಾರಗಳು ದನಿಗೂಡಿಸಬೇಕಿದೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಸಲ ಮಾಡುವ ನೂರಾರು ಎನ್‌ಜಿಒಗಳಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿದೆ. ವನ್ಯಜೀವಿ ಘಟಕವಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವಿದೆ. ಇವರೆಲ್ಲರೂ ಕೈಜೋಡಿಸಿದರೆ ಬೆಂಗಳೂರಿನಲ್ಲಿ ಪರಿಸರ ಕಾಳಜಿ ನಿರ್ಮಿಸಬಲ್ಲ ಒಂದು ೃಹತ್‌ ಅಭಿಯಾನ ನಡೆಸಬಹುದು.

ಸೋಮವಾರ, ಜನವರಿ 26, 2009


ಇಂಜಿನಿಯರ್ಸ್‌ ಕೈಗೆ ಕಸ!



ಇನ್ನುಮುಂದೆ ಎಂಜಿನಿಯರುಗಳು ಕಸಬರಗೆ ಹಿಡಿಯಲಿದ್ದಾರೆ! ಬೆಂಗಳೂರಿನಲ್ಲಿ ಈಗ ನಿತ್ಯ ಉತ್ಪತ್ತಿಯಾಗುವ ಅಷ್ಟೂ ಕಸ ವಿಲೇವಾರಿಗೆ ಇಂಜಿನಿಯರುಗಳು ಹೊಣೆ. ಬೆಳಗಾಯಿತೆಂದರೆ ನಿಮ್ಮ ಏರಿಯಾಗಳಲ್ಲಿ ಬೀಳುವ ತ್ಯಾಜ್ಯ ನಿರ್ವಹಣಗೆ ನೀವು ಇನ್ನು ಮುಂದೆ ಇಂಜಿನಿಯರ್‌ಗೆ ಕರೆ ಮಾಡಬೇಕು. ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ ಬರುತ್ತಿಲ್ಲ ಎಂದಾಗಲೂ ನೀವು ಇಂಜಿನಿಯರ್‌ಗೆ ದೂರು ಸಲ್ಲಿಸಬೇಕು. ಆದರೆ ಒಂದು ಎಚ್ಚರಿಕೆ: ನೀವು ಕರೆ ಮಾಡಬೇಕಿರುವುದು ಇನ್ಫೋಸಿಸ್‌, ವಿಪ್ರೋ.....ಐಟಿ ಕಂಪನಿಗಳ ಟೆಕ್ಕಿಗಳಿಗಲ್ಲ. ಕಡ್ಡಾಯವಾಗಿ ಬಿಬಿಎಂಪಿ ಎಂಜಿನಿಯರುಗಳಿಗೆ!
ಬಹಳಷ್ಟು ಮಂದಿಗೆ ಗೊತ್ತಿಲ್ಲದೆ ಇರಬಹುದು. ಇಷ್ಟು ದಿವಸ ಬೆಂಗಳೂರಿನಲ್ಲಿ ಪ್ರತಿನಿತ್ಯ ಬೀಳುವ 3000 ಟನ್‌ ತ್ಯಾಜ್ಯವನ್ನು ನಿರ್ವಹಿಸುತ್ತಿದ್ದವರು ವೈದ್ಯಾಧಿಕಾರಿಗಳು(ಆರೋಗ್ಯ ಇಲಾಖೆ). ಸ್ಟೆಥಸ್ಕೋಪ್‌ ಹಿಡಿದು ಆರೋಗ್ಯದ ಅರಿವು ಮೂಡಿಸಬೇಕಾದ ವೈದ್ಯರಿಗೆ ಕಸಬರಿಗೆ ಕೊಟ್ಟಿತ್ತು ನಮ್ಮ ೃಹತ್‌ ಪಾಲಿಕೆ!
ಆರೋಗ್ಯ ಎಂಜಿನಿಯರಿಂಗ್‌ ವಿಭಾಗ: ಬಿಬಿಎಂಪಿ ಈಗ `ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್‌ ವಿಭಾಗ' ಎಂಬ ಹೊಸ ವಿಭಾಗವೊಂದನ್ನು ರಚಿಸಲು ನಿರ್ಧರಿಸಿದ್ದು, ತಾಜ್ಯ ವಿಲೇವಾರಿ ಕರ್ತವ್ಯವನ್ನು ಆರೋಗ್ಯ ಇಲಾಖೆಯ ಬದಲಾಗಿ ಈ ಹೊಸ ಇಂಜಿನಿಯರಿಂಗ್‌ ಇಲಾಖೆಗೆ ವಹಿಸಲಿದೆ.
ಇಷ್ಟರಲ್ಲೇ ವಿಭಾಗ ರಚನೆಯಾಗಲಿದ್ದು, ರಚನೆಯಾಗುವ ತನಕ ಆಯಾ ಬಿಬಿಎಂಪಿ ವಾರ್ಡಿನ ಎಂಜಿನಿಯರುಗಳು ತ್ಯಾಜ್ಯ ವಿಲೇವಾರಿ ಕಾರ್ಯ ನೋಡಿಕೊಳ್ಳಲಿದ್ದಾರೆ. ಜ. 1ರಿಂದ ಜಾರಿಯಾಗುವಂತೆ ಈಗಾಗಲೆ ವೈದ್ಯಾಧಿಕಾರಿಗಳ ಕಸ ವಿಲೇವಾರಿ ಜವಬ್ದಾರಿಯನ್ನು ನಗರಸಭೆ ವಾರ್ಡಿನ ಎಂಜಿನಿಯರುಗಳಿಗೆ ವಹಿಸಲಾಗಿದೆ.
ಪರಿಸರ ಎಂಜಿನಿಯರುಗಳ ಸಹಕಾರ: ಬಿಬಿಎಂಪಿಯಲ್ಲಿ ಒಟ್ಟು ಆರು ಮಂದಿ ಪರಿಸರ ಎಂಜಿನಿಯರುಗಳಿದ್ದಾರೆ. ಇವರ ಕೆಲಸ: ತಾಜ್ಯ ನಿರ್ವಹಣಗೆ ಸೂಕ್ತ ಜಾಗವನ್ನು ಗುರ್ತಿಸುವುದು, ವಿಲೇವಾರಿ ಸ್ಥಳದಲ್ಲಿ ಉಂಟಾಗುತ್ತಿರುವ ಪರಿಸರ ಹಾನಿ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಹಾಗೂ ತ್ಯಾಜದ ಸಾಗಾಣಿಗೆ ಕಾರ್ಯವನ್ನು ನಿರ್ವಹಿಸುವುದು. ಇಷ್ಟೊಂದು ಕಾರ್ಯವನ್ನು ಕೇವಲ ಆರು ಮಂದಿ ಪರಿಸರ ಎಂಜಿನಿಯರುಗಳು ನಿರ್ವಹಿಸುತ್ತಿರುವುದು ದೊಡ್ಡ ತಮಾಷೆ!
ಆದರೆ ಈಗ ನೂತನವಾಗಿ ರಚನೆಯಾಗುತ್ತಿರುವ ವಿಭಾಗದಿಂದ ಇನ್ನಷ್ಟು ಎಂಜಿನಿಯರುಗಳು ಕಸ ನಿರ್ವಹಣೆಗೆ ನೆರವಾಗಲಿದ್ದಾರೆ. ಅಲ್ಲದೆ ನೂತನ ವಿಭಾಗಕ್ಕೆ ಪರಿಸರ ಎಂಜಿನಿಯರುಗಳು ತಾಂತ್ರಿಕ ನೆರವು ನೀಡಲಿದ್ದಾರೆ. ಇವರು ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಅನುಭವನ್ನು ನೂತನ ಎಂಜಿನಿಯರುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕಡೆಗೂ ಬಿಬಿಎಂಪಿಗೆ ಜ್ಞಾನೋದಯ: ಭಾರತದಲ್ಲಿರುವ ಮೆಟ್ರೋಪಾಲಿಟನ್‌ ನಗರಗಳಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಕಡೆಯ ಸ್ಥಾನದಲ್ಲಿದೆ. ಇದಕ್ಕೆ ಸಾಕ್ಷಿ ಎಂದರೆ ಕಸ ವಿಲೇವಾರಿ ಜವಬ್ದಾರಿಯನ್ನು ಆರೋಗ್ಯ ಇಲಾಖೆಯ ವೈದ್ಯಾದಿಕಾರಿಗಳ ಸುಪರ್ದಿಗೆ ನೀಡಿರುವುದು. ಬೇರೆ ನಗರಗಳಲ್ಲಿ ಹಾಗಿಲ್ಲ. ಅಲ್ಲಿ ಈಗಾಗಲೆ ಇಂಜಿನಿಯರ್‌ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಈಗ ಬಿಬಿಎಂಪಿಯೂ ಕೂಡ ಈ ವಿಭಾಗ ರಚಿಸುತ್ತಿರುವುದನ್ನು ನೋಡಿದರೆ ಜ್ಞಾನೋದಯವಾದಂತೆ ಕಾಣುತ್ತದೆ.
ನಿಟ್ಟುಸಿರು ಬಿಟ್ಟ ವೈದ್ಯರು: ಬೆಂಗಳೂರು ಕಸ ನಿರ್ವಹಣೆಯಿಂದ ಬಿಬಿಎಂಪಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ನಿವೃತ್ತಿ ಪಡೆದಿದ್ದಾರೆ. ಈಗ ತಮ್ಮ ಆರೋಗ್ಯ ಸೇವೆಯತ್ತ ತಮ್ಮ ಗಮನ ಹರಿಸಲಿದ್ದಾರೆ. ಬೀರೂವಿನಲ್ಲಿ ಧೂಳು ಹಿಡಿದಿರುವ ಸ್ಟೆಥಸ್ಕೊಪ್‌ಗೆ ಕೆಲಸ ನೀಡಲಿದ್ದಾರೆ. ಜಾರಿ ಆಗದೇ ಬಿದ್ದುಕೊಂಡಿರುವ ಅಸಂಖ್ಯಾತ ಯೋಜನೆಗಳತ್ತ ಗಮನ ಹರಿಸಲಿದ್ದಾರೆ.
ಕಸ ನಿರ್ವಹಣೆ ವೈದ್ಯಾಧಿಕಾರಿಗಳಿಗೆ ಬಹುದೊಡ್ಡ ತಲೆ ನೋವಾಗಿತ್ತು. ಬಹುಕಾಲದಿಂದ ಬಿಬಿಎಂಪಿಯ ಕ್ರಮವನ್ನು ವಿರೋಧಿಸುತ್ತಾ ಬಂದಿದ್ದರು. ಹಲವು ಭಾರಿ ಪ್ರತಿಭಟನೆಗಳನ್ನೂ ನಡೆಸಿದ್ದರು. ಆದರೆ ಪಾಲಿಕೆ ವೈದ್ಯರ ಆಗ್ರಹವನ್ನು ತೊಟ್ಟಿಯಲ್ಲಿ ಬಿಸಾಡಿತ್ತು. ವೈದ್ಯಾಧಿಕಾರಿಗಳು ಈಗ ನಿರಾಳ. ದೀರ್ಘ ಕಾಲದ ಹೋರಾಟಕ್ಕೆ ಸಿಕ್ಕ ಜಯ ಎಂದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ತಾಜ್ಯ ನಿರ್ವಹಣೆ ೃಹತ್‌ ನಗರಗಳ ಮುಂದಿರುವ ಒಂದು ೃಹತ್‌ ಸವಾಲು. ಇದು ಅಂತಾರಾಷ್ಟ್ರೀಯ ವಿಷಯ ಕೂಡ. ತಾಜ್ಯ ನಿರ್ವಹಣೆ ಕುರಿತಂತೆ ದೇಶ ದೇಶಗಳ ನಡುವೆ ಒಪ್ಪಂದ ಒಡಂಬಡಿಕೆಗಳಿವೆ. ಭಾರತದಲ್ಲಿ ತಾಜ್ಯ ನಿರ್ವಹಣೆ ಕುರಿತಂತೆ ಹಲವು ಕಾನೂನುಗಳಿವೆ. ನೀತಿ ನಿಯಮಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಜ್ಯ ಸಾಗಣೆ ಕುರಿತಂತೆ 1989ರ ಬೆಸೆಲ್‌ ಮಾತುಕತೆ ಪ್ರಮುಖವಾದುದು.
ಇವುಗಳ ನಡುವೆ ಪ್ರಾದೇಶಿಕ ಮಟ್ಟದಲ್ಲಿ ತೆಗೆದುಕೊಳ್ಳುವ ಕ್ರಮಗಳು ತಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲವು. ಈ ನಿಟ್ಟಿನಲ್ಲಿ ತಾಜ್ಯ ನಿರ್ವಹಣೆಗೆ ಬಿಬಿಎಂಪಿ ತೆಗೆದುಕೊಂಡಿರುವ ಕ್ರಮ ಯಾವ ರೀತಿಯ ಫಲಿತಾಂಶ ತರಲಿದೆ ಎಂದು ಕಾದು ನೋಡಬೇಕಿದೆ.

ಬುಧವಾರ, ಜನವರಿ 7, 2009


ವರದಿಯ ಪರಿಣಾಮ






ಭಾನುವಾರ, ಜನವರಿ 4, 2009



ಮಾಯವಾದ ಐತಿಹಾಸಿಕ ಹಸಿರುಕೋಟೆ


ಅದು ಶೇಷಾದ್ರಿ ರಸ್ತೆ. ಮೆಜೆಸ್ಟಿಕ್‌ಗೆ ಬಹಳ ಹತ್ತಿರವಿದೆ. ಸಮೀಪದಲ್ಲೇ ವಿಧಾನ ಸೌಧ ಇದೆ. ಹೈಕೋರ್ಟ್‌ ಇದೆ. ಅಲ್ಲೇ ಮಹಾರಾಣಿ ಕಾಲೇಜಿದೆ. ಸರ್ಕಾರಿ ಪಾಲಿಟೆಕ್ನಿಕ್‌ ಇದೆ. ಅಲ್ಲಿ ಸದಾ ಗಿಜಿ ಗಿಜಿ ಎನ್ನುವ ವಿದ್ಯಾರ್ಥಿಗಳು. ಕೋರ್ಟಿಗೆ ಹೋಗುವ ನ್ಯಾಯವಾದಿಗಳು. ವಿಧಾನ ಸೌಧಕ್ಕೆ ಹೋಗುವ ರಾಜಕಾರಣಿಗಳು.... ಈ ಎಲ್ಲಾ ಕಾರಣಗಳಿಂದ ಅಲ್ಲಿ ಯಾವಾಗಲು ಭಾರಿ ಜನಸಂದಣಿ. ಆಲ್‌ವೇಸ್‌ ಟ್ರಾಫಿಕ್‌ ಜಾಮ್‌!
ರಸ್ತೆಯ ಇಕ್ಕೆಲಗಳಲ್ಲಿ ಮರಗಳ ಸಾಲು. ಮರದ ನೆರಳಲ್ಲಿ ಬಸ್‌ ಕಾಯುವ ವಿದ್ಯಾರ್ಥಿಗಳು, ನಾಗರಿಕರು. ಮರದ ಬುಡದಲ್ಲಿ ಕೂತು ಚಪ್ಪಲಿ ಹೊಲೆಯುವವರು. ಸೀಬೆಕಾಯಿ ಮಾರುವವರು...
ಶೇಷಾದ್ರಿ ಟ್ರಾಫಿಕ್‌ನೊಳಗೆ ನಿಂತಾಗ ಒಂದು ಅದೇನೋ ಒಂಥರಾ ನೆಮ್ಮದಿ. ಭದ್ರಕೋಟೆ ಭದ್ರತೆಯ ಅನುಭವ. ಕಡುಬಿಸಿಲು ಅಲ್ಲಿಗೆ ಬರಲು ಛಾನ್ಸೆ ಇರಲಿಲ್ಲ. ಕಾರಣ ಇಷ್ಟೆ: ಅಲ್ಲಿ ದಟ್ಟಣೆಯ ಮರಗಳ ಸಾಲಿದೆ. ರಸ್ತೆಯ ಎರಡೂ ಕಡೆ ಭಾರಿ ಗಾತ್ರದ ಮರಗಳು ರಸ್ತೆಯನ್ನು ಕೋಟೆಯಂತೆ ಕಾದಿವೆ.
*****
ಈಗ ಆ ನೆಮ್ಮದಿ ಮಂಗಮಾಯ. ಭದ್ರಕೋಟೆ ಬಿದ್ದುಹೋಗಿದೆ. ಶೇಷಾದ್ರಿ ರಸ್ತೆಯ ಚಿತ್ರಣ ಬದಲಾಗಿದೆ. ಅಲ್ಲಿ ಮರಗಳೂ ಇಲ್ಲ. ಮರದ ನೆರಳೂ ಇಲ್ಲ. ಬರೀ ಬೋಳು ಬೋಳು!
ಸದ್ಯ ಶೇಷಾದ್ರಿ ರಸ್ತೆಗೆ ಹೋಗಿ. ತಕ್ಷಣ ಕನ್‌ಪ್ಸೂಸ್‌ ಆಗುತ್ತೆ. ದಾರಿ ತಪ್ಪಿದೆನೆ? ಅನ್ನಿಸುತ್ತೆ. ೃಹತ್‌ ಪಾಲಿಕೆಯ ಬಾಯಿಗೆ ಶೇಷಾದ್ರಿ ರಸ್ತೆಯ `ಐತಿಹಾಸಿಕ ಹಸಿರು ಕೋಟೆ' ತುತ್ತಾಗಿದೆ. ಆದರೆ ಅದು ನಿತ್ಯ ನಡೆದಾಡುವ ಮಂದಿಗೆ ನುಂಗಲಾಗದ ತುತ್ತು!
******
ಇದು ಬರೀ ಶೇಷಾದ್ರಿ ರಸ್ತೆಯ ಕತೆಯಲ್ಲ. ನಗರದ 120 ರಸ್ತೆಗಳ ಕತೆ. ಕಳೆದ ಆರು ತಿಂಗಳಿಂದ ವಿವಿಧ ರಸ್ತೆಗಳು ತನ್ನ ಐತಿಹಾಸಿಕ ಪರಂಪರೆಯನ್ನು ಕಳೆದುಕೊಳ್ಳುತ್ತಿವೆ.
ಬಿಬಿಎಂಪಿ ತನ್ನ ಕಾರ್ಯಾಚರಣೆಯನ್ನು ಬಳ್ಳಾರಿ ರಸ್ತೆಯಿಂದ ಆರಂಭಿಸಿತು. ಅಲ್ಲಿಯ ನೂರಾರು ರಸ್ತೆಗಳು ನೆಲಕ್ಕುರುಳಿದವು. ಕೆಲ ಪರಿಸರ ವಾದಿಗಳು ವಿರೊಧ ವ್ಯಕ್ತಪಡಿಸಿದರು. `ಹಸಿರು ಉಸಿರು' ಎನ್ನುವ ಎನ್‌ಜಿಒವೊಂದು ಬಿಬಿಎಂಪಿಯ ಮರಕಡಿತ ಕಾರ್ಯಾಚರಣೆಯನ್ನು ವಿರೋಧಿಸಿ ಉಚ್ಛನ್ಯಾಯಾಲಯದ ಮುಂದೆ ರಿಟ್‌ ಅರ್ಜಿಯನ್ನೂ ಸಲ್ಲಿಸಿತು. ಆದರೆ ಆ ಕೇಸು ಬಿದ್ದು ಹೋಯಿತು.
ಆ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಮತ್ತೆ ಆರಂಭವಾಯಿತು. ಕ್ವೀನ್ಸ್‌ ರಸ್ತೆಯ ಹತ್ತಾರು ಮರಗಳಿಗೆ ಕೊಡಲಿ ಹಾಕಲಾಯಿತು. ರೇಸ್‌ಕೋರ್ಸ್‌ ರೋಡಿನ ಮರ ಕಡಿದು ಆ ಜಾಗದಲ್ಲಿ ಸಿಮೆಂಟ್‌ ರೋಡು ಮಾಡಿದ್ದಾಯಿತು. ಮೈಸೂರು ರಸ್ತೆಯ ಬಿಎಚ್‌ಇಎಲ್‌ ಕಾರ್ಖಾನೆಯ ಸಮೀಪದ ಹಲವು ೃಹತ್‌ ಮರಗಳಿಗೆ ನೆಲ ತೋರಿಸಿದ್ದಾಯಿತು....
120 ರಸ್ತೆಗಳ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಇಡೀ ನಗರ ಬೋಳಾಗಲಿದೆ.
ಗೊತ್ತೇ ಆಗದ ವಿಷಯ: ಸರ್ಕಾರದ ಇಲಾಖೆಗಳು ತೆಗೆದುಕೊಳ್ಳುವ ಕೆಲವೊಂದು ವಿಚಾರಗಳು ಸಾರ್ವಜನಿಕವಾಗಿ ಗೊತ್ತೇ ಆಗುವುದಿಲ್ಲ. ಅದರ ಪರಿಣಾಮ ಮಾತ್ರ ಅರಿವಾಗುತ್ತದೆ. ಬಿಬಿಎಂಪಿ ತೆಗೆದುಕೊಂಡ ರಸ್ತೆ ಅಗಲೀಕರಣದ ವಿಷಯ ಸಾರ್ವಜನಿಕವಾಗಿ ತಿಳಿದಿದ್ದು ಮರಗಳು ನೆಲಕ್ಕೆ ಉರುಳಿದಾಗ. ಇದು ನಾಗರಿಕರಿಗೆ ಮಾಡುವ ಮೋಸವಲ್ಲದೆ ಮತ್ತಿನ್ನೇನು?
ಇಲಾಖೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಾಗ ಅದರ ಸಾಧಕ ಬಾದಕಗಳನ್ನು ಮೊದಲು ಸಾರ್ವಜನಿಕರ ಮುಂದಿಟ್ಟು ಸಾರ್ವಜನಿಕ ಅಭಿಪ್ರಾಯ ನಿರ್ಮಾಣ ಮಾಡಬೇಕು. ಆದರೆ ಈ ಕೆಲಸ ನಡೆಯುತ್ತಿಲ್ಲ. ಅಧಿಕಾರಿಗಳು, ಸ್ವಹಿತ ರಾಜಕಾರಣಿಗಳು, ಸಂಬಂಧಪಟ್ಟ ವಿಷಯ ಜ್ಞಾನವೇ ಇಲ್ಲದ ತಜ್ಞರು. ಜೊತೆಗೆ ಕಾಣದ ಕೈಗಳು! ಇವರು ಆಡಿದ್ದೇ ಮಾತು. ಅದೇ ನಿರ್ಧಾರ. ಅಭಿಪ್ರಾಯ. ಜನಾಭಿಪ್ರಾಯ.

ಶನಿವಾರ, ಜನವರಿ 3, 2009




ಎಂಜಿ ರೋಡಿನ ಒಂದು ಮ್ಯಾನ್‌ಹೋಲ್‌ ಕಥೆ!





ಎಂ.ಜಿ. ರಸ್ತೆಯಲ್ಲಿ ನಡೆದಾಡುವವರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಕಳೆದ 20 ದಿನಗಳಿಂದ ಶಂಕರ್‌ನಾಗ್‌ ಥಿಯೇಟರ್‌ ಎದುರಿನ ಮಿಲಿಟರಿ ಕಚೇರಿ ಬಳಿ ಒಳಚರಂಡಿ ಮ್ಯಾನ್‌ಹೋಲ್‌ ಒಡೆದು ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ. ಈವರೆಗೂ ಯಾರೂ ತಲೆಕೆಡಿಸಿಕೊಂಡಿಲ್ಲ. ಬೆಂಗಳೂರಿನ ಪ್ರತಿಷ್ಠಿತ ರಸ್ತೆಯಲ್ಲೇ ಈ ಸ್ಥಿತಿ ಇದೆ ಅಂತಾದರೆ ಇತರ ಬಡಾವಣೆಗಳ ಪಾಡೇನು?
ಮೊನ್ನೆ ಯಾರೋ ಸ್ಥಳೀಯರು ತ್ಯಾಜ್ಯ ಹರಿಯುತ್ತಿದ್ದ ಜಾಗಕ್ಕೆ ಫಿನಾಯಿಲ್‌ ಹಾಕಿ ಕೆಟ್ಟ ವಾಸನೆ ತಡೆಯಲು ಪ್ರಯತ್ನಿಸಿದ್ದರು. ಆದರೂ ವಾಸನೆ ನಿಂತಿಲ್ಲ. ಎಷ್ಟು ಕೆಟ್ಟ ವಾಸನೆ ಅಂದರೆ ಮನೆಗೆ ಹೋಗಿ ಅದನ್ನು ನೆನಸಿಕೊಂಡರೆ ಊಟ ಸೇರದಷ್ಟು!
ಮಿಲಿಟರಿ ಕಚೇರಿಯಿಂದ ರಸ್ತೆಯ ಎಡಭಾಗದಲ್ಲಿ ತ್ಯಾಜ್ಯದ ಹರಿವು ಪ್ರಾರಂಭವಾಗಿ ಮೆಯೋ ಹಾಲ್‌ ತಿರುವಿನಲ್ಲಿ ದಿಣ್ಣೆ ಇರುವುದರಿಂದ ಮುಂದೆ ಹರಿಯಲು ಸಾಧ್ಯವಾಗದೆ ಆ ಜಾಗದಲ್ಲಿ ನಿಂತಿದೆ. ಓಡಾಡುವವರು ಯಾತನೆ ಪಟ್ಟುಕೊಳ್ಳುವಷ್ಟು ಅಸಹ್ಯ ವಾಸನೆ ಸೃಷ್ಟಿಯಾಗಿದೆ. ಗ್ರಹಚಾರಕ್ಕೆ ಅಲ್ಲೇ ಟ್ರಾಫಿಕ್‌ ಸಿಗ್ನಲ್‌ ಕೂಡ ಇದೆ. ಮೂರು ನಿಮಿಷ ವಾಸನೆಯೊಳಗೆ ನಿಲ್ಲಬೇಕು. ಅಲ್ಲೇ ದಿನವಿಡೀ ನಿಲ್ಲುವ ಟ್ರಾಫಿಕ್‌ ಪೊಲೀಸ್‌ ಗತಿ ಏನಾಗಿರಬೇಕು ಊಹಿಸಿ.
ಈ ಕುರಿತು ಆತನನ್ನು ಸಾರ್ವಜನಿಕರು ಕೇಳಿದ್ದಕ್ಕೆ, `ಈ ದರಿದ್ರ ವಾಸನೆ ಕುಡಿದು ನನ್ನ ಮೂಗೇ ಹಾಳಾಗಿ ಹೋಗಿದೆ. 20 ದಿನ ಆಯ್ತು. ಮೂಗಿಗೆ ಕ್ಯಾಪ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ಹಾದು ಹೋಗುವ ಜನರೆಲ್ಲಾ ನನ್ನನ್ನ ಕೇಳ್ತಾರೆ. ಇದರ ಬಗ್ಗೆ ನನಗೇನು ಗೊತ್ತು. ನಾನೇನು ಕಾರ್ಪೊರೇಷನ್‌ನವನಾ' ಎಂದು ಉರಿದು ಬೀಳುತ್ತಾರೆ.
ಟ್ರಾಫಿಕ್‌ನಲ್ಲಿ ನಿಂತವರೆಲ್ಲಾ ಒಂದೊಂದು ಮಾತು. ಪಕ್ಕದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೆಟ್ರೋದಂತಹ ೃಹತ್‌ ಕಾಮಗಾರಿಯ ಮುಂದೆ ಮ್ಯಾನ್‌ಹೋಲ್‌ನಂತಹ ಪುಟ್ಟ ಕಾಮಗಾರಿ ಸಂಬಂಧಪಟ್ಟವರ ಕಣ್ಣಿಗೆ ಕಾಣಿಸುತ್ತಿಲ್ಲವೇನೋ!
ಇಲಾಖೆಯ ಸಹವಾಸವೇ ಅಲ್ಲ:


ನಗರದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್‌ ಅವರನ್ನು ಈ ಕುರಿತು ಸಂಪರ್ಕಿಸಿದಾಗ, `ಈವರೆಗೂ ಕಂಪ್ಲೇಂಟ್‌ ಬಂದಿಲ್ಲ. ನಿಮ್ಮ ಕರೆಯನ್ನೇ ದೂರು ಅಂತ ಪರಿಗಣಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ' ಎಂಬ ಭರವಸೆ ಕೊಟ್ಟು ಜಾರಿಕೊಂಡರು. ಮೆಟ್ರೋ ಕಾಮಗಾರಿಯಿಂದಾಗಿ ಕ್ರಮ ತೆಗೆದುಕೊಳ್ಳಲು ತಡವಾಗುತ್ತಿದೆಯೇ ಎಂದು ಕೇಳಿದ್ದಕ್ಕೆ, ಮೆಟ್ರೋಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಯಾರೂ ದೂರು ಸಲ್ಲಿಸದೇ ಇರುವುದರಿಂದ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಸಿದ್ಧ ಉತ್ತರ.
ಈ ಅಧಿಕಾರಿಗಳಿಗೆ ಎಂಜಿ ರಸ್ತೆಯ ಈ ಭಾಗ ಯಾವ ಸೇವಾಠಾಣೆಯ ವ್ಯಾಪ್ತಿಗೆ ಬರುತ್ತೆ ಅನ್ನೋದೇ ಗೊತ್ತಿಲ್ಲ. ಅಲ್ಲಿಗೆ ಫೋನ್‌ ಮಾಡಿ, ಇಲ್ಲಿಗೆ ಫೋನ್‌ ಮಾಡಿ ಎನ್ನುತ್ತಾ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.
ನಗರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ 110 ಸೇವಾಠಾಣೆಗಳಿವೆ. ವಿವಿಧ ಬಡಾವಣೆಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯೂ ಇದೆ. ಯಾರು ಬೇಕಾದರೂ ಕರೆ ಮಾಡಿ ದೂರು ಸಲ್ಲಿಸಬಹುದು. (Intraviros Response System 155313)
ಎಂ.ಜಿ. ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಒಡೆದ ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಇಲ್ಲಿಯವರೆಗೂ ಯಾವ ದೂರು ದಾಖಲಾಗಿಲ್ಲ ಅಥವಾ ಸಲ್ಲಿಸಿದ ದೂರನ್ನು ನಿರ್ಲಕ್ಷಿಸಿರಬಹುದು.
ನಗರದ ಹೃದಯ ಭಾಗದ ಗತಿಯೇ ಹೀಗಾದರೆ ಬೇರೆ ಹೊರ ವಲಯಗಳ ಪಾಡೇನು ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಒಟ್ಟಿನಲ್ಲಿ ವಾಸನೆ ಕುಡಿಯುವುದು ಜನರ ನಿತ್ಯ ಕರ್ಮವಾಗಿದೆ! ಸದ್ಯ ಜನರಿಗೆ ಕಾಯುವುದೇ ಕಾಯಕ.








ಊರೆಲ್ಲಾ ಅಗೆತ, ಕೊರೆತ!





ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದರೂ ಬರೀ ಅಗೆತ. ಕೊರೆತ!
ನೀರಿಗಾಗಿ, ರೋಡಿಗಾಗಿ, ಮನೆ ಮೇಲೆ ಮನೆ ಪೇರಿಸಲು, ಮಹಡಿ, ಮಹಲು, ಮೆಟ್ರೋ, ಅಂಡರ್‌ಗ್ರೌಂಡ್‌, ಕಾರಿಡಾರ್‌, ಅಡೆಗೋಡೆ, ತಡೆಗೋಡೆ, ಪ್ಲಾಂಟೇಷನ್ಸ್‌, ಯೂನಿಟ್ಸ್‌......ಭೂಮಿಯನ್ನು ಅಗೆದು ಕೊರೆದು ಕುಟ್ಟಿ ನೆಲವನ್ನು ಬಿಲ ಮಾಡಿಬಿಟ್ಟಿದ್ದಾರೆ.
ಕಾವೇರಿಯನ್ನು ಮನೆ ಮನೆಗೆ ಕರೆದುಕೊಂಡು ಹೋಗುವುದಕ್ಕೆ ಅಗೆತ. ಮನೆ ಕಟ್ಟುವುದಕ್ಕೆ ಅಗೆತ. ಕೆಡವುದಕ್ಕೂ ಅಗೆತ! ರಸ್ತೆ ಅಗಲೀಕರಣಕ್ಕೆ ಅಗೆತ ಅಗೆತ.... ಹೊಸೂರು ರಸ್ತೆಯಲ್ಲಿ ವರ್ಷಪೂರ್ತಿ ಅಗೆತ ನಡೆಯುತ್ತದೆ. ಮೈಸೂರು ರಸ್ತೆ ಕರ್ಮಕಾಂಡ! ವರ್ಷಗಳಿಂದಲೂ ಅಗಲೀಕರಣ ನಡೆಯುತ್ತಲೇ ಇದೆ. ಬಳ್ಳಾರಿ ರಸ್ತೆಯಲ್ಲಿ ಮರಗಳಿಗೆ ಉಳಿಗಾಲವಿಲ್ಲ. ತುಮಕೂರು ರಸ್ತೆಯಲ್ಲಿ ಪ್ರತಿನಿತ್ಯ ಕಾಮಗಾರಿ. ವಿಜಯ ನಗರ ಅಂಡರ್‌ಪಾಸ್‌ ಕಾಮಗಾರಿ ಕುಂಟುತ್ತಿದೆ. ರಾಜಾಜಿ ನಗರದ ಬೈಪಾಸ್‌ ಮುಗಿದಿಲ್ಲ. ಒಂದಾ ಎರಡಾ.....ಒಟ್ಟಿನಲ್ಲಿ ಭೂ ಮೇಲಿನ ದಾಳಿ ನಿರಾತಂಕವಾಗಿ ನಡೆಯುತ್ತಿದೆ.
ಕಾಮಗಾರಿಗಳನ್ನು ಮುಗಿಸಲು ಇಲಾಖೆಗಳಿಗೆ ಮನಸಿಲ್ಲ. ಡೆಡ್‌ಲೈನ್‌ಗಳು ಮುಂದಕ್ಕೆ ಹೋಗುತ್ತಲೇ ಇವೆ. ತಿಂಗಳು ಅಂದದ್ದು ವರ್ಷ ಆದರೂ ಮುಗಿಯೊಲ್ಲ. ಇತ್ತೀಚೆಗೆ ಬಿಬಿಎಂಪಿ 15 ದಿನಗಳಲ್ಲಿ ಕಾಮಗಾರಿಯೊಂದನ್ನು ಮಗಿಸುವುದಾಗಿ ಹೇಳಿ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡು ನಗೆಪಾಟಲಿಗೆ ಈಡಾಗಿತ್ತು. ಅಧಿಕಾರಿಗಳಿಗೆ ಡೆಡ್‌ಲೈನ್‌ ಪ್ರಜ್ಞಯೇ ಇಲ್ಲ.
ಅಂತರ್ಜಲ ಬತ್ತುತ್ತಿದೆ:
500 ಅಡಿ ಅಲ್ಲ, 1000 ಅಡಿ ಆದ್ರೂ ನೀರು ಬರೋ ತನಕ ಭೂಮಿ ಕೊರೆಯುವುದನ್ನು ಬಿಡದ ನಮ್ಮ ಸೂಪರ್‌ ಪಾಸ್ಟ್‌ ರಿಗ್‌ಗಳು. ಬುರುಡೇಸರ್‌ಗಳು, ಇಟಾಚಿಗಳನ್ನು ನೋಡಿದರೆ ಹೆದರಿಕೆ ಆಗುತ್ತೆ. ಬಂಡಗಲ್ಲನ್ನು ಉಡಾಸುವ ಡೈನೆಮೆಂಟ್‌ಗಳು ಭೂಮಿಯನ್ನು ಮಾತ್ರವಲ್ಲ. ಜೀವವನ್ನೂ ನಡುಗಿಸುತ್ತವೆ. ಸಣ್ಣ ಪುಟ್ಟ ರಸ್ತೆಮಾಡಲೂ ಕೊರೆತ ಇದ್ದೇ ಇದೆ. ಕೊರೆಯುವಾಗ ಬರುವ ಕಟ ಕಟ ಚಟ ಪಟ ಶಬ್ದ ಒಂದು ಕಿಮಿ ದೂರದ ನಿಶಬ್ದತೆಯನ್ನು ನುಂಗಿ ಹಾಕುತ್ತೆ. ಹೊರಹೊಮ್ಮುವ ಧೂಳು ಅಲರ್ಜಿಯಂತಹ ಖಾಯಿಲೆಗಳನ್ನು ಹೊತ್ತು ತರುತ್ತೆ.
ಈ ಅಗೆತದ ದುಷ್ಟರಿಣಾಮದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಭೂ ಕೊರೆತದಿಂದ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಭೂಮಿ ಸಡಿಲಗೊಂಡಾಗ ಅಂತರ್ಜಲ ಬತ್ತಿ ಹೋಗುತ್ತದೆ. ಮೊದಲೆಲ್ಲಾ ನೂರರಿಂದ ಇನ್ನೂರು ಅಡಿ ಕೊರೆದರೆ ಅಂತರ್ಜಲ ಸಿಗುತ್ತಿತ್ತು. ಇವತ್ತು ಐನೂರು ಅಡಿ ಕೊರೆದರೂ ನೀರು ಹನಿಯುವುದಿಲ್ಲ. ಅಗೆತದಿಂದ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಸ್ಥಳೀಯರು ಬಹಳ ಕಿರಿಕಿರಿ ಅನುಭವಿಸಬೇಕು. ಕೊರೆದ ಬಾವಿಯನ್ನು ಮುಚ್ಚದಿದ್ದಾಗ ಇನ್ನೊಂದು ಗಂಭೀರ ಸಮಸ್ಯೆ.
ನಗರಾಭಿವೃದ್ಧಿ:

ಪರದೇಸಿಗಳು ಸುಳಿದಾಡುವ ಈ ಇಂಟರ್‌ನ್ಯಾಷನಲ್‌ ಫೇಮಸ್‌ ಊರಿನಲ್ಲಿ ಉದ್ದದ ಅಗಲದ ರಸ್ತೆ ಇಲ್ಲದಿದ್ದರೆ ಹೇಗೆ? ಎತ್ತರದ ಮಹಡಿ ಮಹಲುಗಳಿಲ್ಲದಿದ್ದರೆ ಹೇಗೆ? ನಗರಾಭಿವೃದ್ಧಿಗೆ ಇವೆಲ್ಲಾ ಬೇಡವೇ?
ಇವೆಲ್ಲಾ ಬೇಕು ನಿಜ. ಆದರೆ ಅದರಿಂದಾಗುವ ದುಷ್ಟರಿಣಾಮಗಳ ಬಗ್ಗೆಯೂ ಯೋಚಿಸಬೇಕು.
ಯಾವುದೇ ಅಪಾರ್ಟ್‌ಮೆಂಟ್‌ ನೋಡಿ. ಪಾರ್ಕಿಂಗ್‌ ಜಾಗ ಅಂಡರ್‌ಗ್ರೌಂಡ್‌ನಲ್ಲಿರುತ್ತದೆ. ಮೊದಲೇ ಬಹುಮಹಡಿ ಕಟ್ಟಡ. ಅಡಿಪಾಯಕ್ಕೆಂದೇ ಮೀಟರ್‌ಗಟ್ಟಲೇ ಕೊರೆದಿದ್ದಾಗಿದೆ. ಪಾರ್ಕಿಂರ್ಗ ಜಾಗಕ್ಕೆ ಮತ್ತೂ ಕೊರೆಯುವುದು. ಇದು ದೊಡ್ಡ ಬಿಸಿನೆಸ್‌.
ಭೂಮಿ ಶೋಷಣೆಯ ವಸ್ತು:
ಈ ಊರಲ್ಲಿ ಭೂಮಿ ಬಂಗಾರ ಅಂತ ಎಲ್ಲರಿಗೂ ಗೊತ್ತು. ಅದರ ಜೊತೆಗೆ ಭೂಮಿ ಶೋಷಣೆಯ ವಸ್ತು. ಪರಿಸರ ತಜ್ಞರು ಬೆಂಗಳೂರಿನ ನಗರಾಭಿವೃದ್ಧಿ ಯೋಜನಗಳ ಬಗ್ಗೆ ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ರಸ್ತೆ ಅಗೆತ, ಬಡಾವಣೆ ನಿರ್ಮಾಣ, ಕೈಗಾರಿಕೆ ನಿರ್ಮಾಣದಂತಹ ಕಾರ್ಯಗಳನ್ನು ಜಾರಿಗೊಳಿಸುವಾಗ ಪರಿಸರ ರಕ್ಷಣೆಯ ಕ್ರಮ ಕೈಗೊಳ್ಳುಬೇಕು ಎಂಬುದು ಅವರ ಒತ್ತಾಯ.
ಪರಿಸರ ಕಮಿಟಿ ರಚನೆ:

ಪರಿಸರ ತಜ್ಞರು ಬಹಳ ದಿನಗಳಿಂದ ಸರ್ಕಾರದ ಮುಂದೆ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಒಂದು ಯೋಜನೆಯನ್ನು ಜಾರಿಗೊಳಿಸುವಾಗ ಆ ಯೋಜನೆಯ ಸಾಧಕ ಬಾಧಕಗಳು, ಪರಿಸರದ ಮೇಲೆ ಯೋಜನೆಯ ಪರಿಣಾಮಗಳನ್ನು ನಿರ್ಧರಿಸಲು ಪರಿಸರವಾದಿಗಳ ಕಮಿಟಿ ರಚಿಸಬೇಕು ಎಂಬ ಒತ್ತಾಯ ಇದೆ. ಸರ್ಕಾರದ ಭರವಸೆಯೂ ಇದೆ. ಭರವಸೆ ಈಡೇರಿಲ್ಲ ಅಷ್ಟೆ. ಕೆಲವೊಂದು ಯೋಜನೆಗಳಿಗೆ ಕಮಿಟಿಗಳು ರಚನೆಯಾಗಿದ್ದವು. ಆದರೆ ಈಗ ಆ ಕಮಿಟಿಗಳು ಜೀವಂತವಾಗಿಲ್ಲ.
ಖಾಸಗಿ ಕಾರಿಡಾರ್‌ ಯೋಜನೆಗಳನ್ನು ಜಾರಿಗೊಳಿಸುವಾಗ ಅದರಿಂದಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನವನ್ನು( Environmental Impact Assessment) ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅಥವಾ ರಾಜ್ಯ ಪರಸರ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು. ಆದರೆ ಇದೊಂದು ದೊಡ್ಡ ಮೋಸ. ಅಧ್ಯಯನದಲ್ಲಿ ಒಂದು ಇದ್ದರೆ, ಯೋಜನೆ ಜಾರಿಗೊಂಡಾಗ ಇನ್ನೊಂದು ಇರುತ್ತದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಗೆತಗಳಿಗೆ ಅವೈಜ್ಞಾನಿಕ ಯೋಜನೆಗಳು, ಇಲಾಖೆಗಳ ಅಧಿಕಾರಿಗಳ ಸೋಮಾರಿತನ, ರಾಜಕಾರಣಿಗಳ ಹೊಟ್ಟೆಬಾಕತನವೇ ಕಾರಣ. ಅಧಿಕಾರಿಗಳು ಪರಿಸರ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಮಂಡಳಿಗೆ ವರದಿಗಳನ್ನು ಮಾತ್ರ ರವಾನಿಸುತ್ತಿದೆ. ಮಾಲಿನ್ಯ ಮಾತ್ರ ನಿಯಂತ್ರಣದಲ್ಲಿ ಇಲ್ಲ.
ಸರ್ಕಾರದ ಅಭಿವೃದ್ಧಿ ಮಂತ್ರದಲ್ಲಿ ಪರಿಸರ ಕಾಳಜಿ ಎಳ್ಳಷ್ಟೂ ಇಲ್ಲ. ಹೀಗಾದ್ರೆ ಜೀವ ವೈವಿಧ್ಯವನ್ನು ಕಾಯುವ ಭೂಮಿಯನ್ನು ಕಾಯುವವರು ಯಾರು?