ಶನಿವಾರ, ಜನವರಿ 3, 2009




ಎಂಜಿ ರೋಡಿನ ಒಂದು ಮ್ಯಾನ್‌ಹೋಲ್‌ ಕಥೆ!





ಎಂ.ಜಿ. ರಸ್ತೆಯಲ್ಲಿ ನಡೆದಾಡುವವರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಕಳೆದ 20 ದಿನಗಳಿಂದ ಶಂಕರ್‌ನಾಗ್‌ ಥಿಯೇಟರ್‌ ಎದುರಿನ ಮಿಲಿಟರಿ ಕಚೇರಿ ಬಳಿ ಒಳಚರಂಡಿ ಮ್ಯಾನ್‌ಹೋಲ್‌ ಒಡೆದು ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ. ಈವರೆಗೂ ಯಾರೂ ತಲೆಕೆಡಿಸಿಕೊಂಡಿಲ್ಲ. ಬೆಂಗಳೂರಿನ ಪ್ರತಿಷ್ಠಿತ ರಸ್ತೆಯಲ್ಲೇ ಈ ಸ್ಥಿತಿ ಇದೆ ಅಂತಾದರೆ ಇತರ ಬಡಾವಣೆಗಳ ಪಾಡೇನು?
ಮೊನ್ನೆ ಯಾರೋ ಸ್ಥಳೀಯರು ತ್ಯಾಜ್ಯ ಹರಿಯುತ್ತಿದ್ದ ಜಾಗಕ್ಕೆ ಫಿನಾಯಿಲ್‌ ಹಾಕಿ ಕೆಟ್ಟ ವಾಸನೆ ತಡೆಯಲು ಪ್ರಯತ್ನಿಸಿದ್ದರು. ಆದರೂ ವಾಸನೆ ನಿಂತಿಲ್ಲ. ಎಷ್ಟು ಕೆಟ್ಟ ವಾಸನೆ ಅಂದರೆ ಮನೆಗೆ ಹೋಗಿ ಅದನ್ನು ನೆನಸಿಕೊಂಡರೆ ಊಟ ಸೇರದಷ್ಟು!
ಮಿಲಿಟರಿ ಕಚೇರಿಯಿಂದ ರಸ್ತೆಯ ಎಡಭಾಗದಲ್ಲಿ ತ್ಯಾಜ್ಯದ ಹರಿವು ಪ್ರಾರಂಭವಾಗಿ ಮೆಯೋ ಹಾಲ್‌ ತಿರುವಿನಲ್ಲಿ ದಿಣ್ಣೆ ಇರುವುದರಿಂದ ಮುಂದೆ ಹರಿಯಲು ಸಾಧ್ಯವಾಗದೆ ಆ ಜಾಗದಲ್ಲಿ ನಿಂತಿದೆ. ಓಡಾಡುವವರು ಯಾತನೆ ಪಟ್ಟುಕೊಳ್ಳುವಷ್ಟು ಅಸಹ್ಯ ವಾಸನೆ ಸೃಷ್ಟಿಯಾಗಿದೆ. ಗ್ರಹಚಾರಕ್ಕೆ ಅಲ್ಲೇ ಟ್ರಾಫಿಕ್‌ ಸಿಗ್ನಲ್‌ ಕೂಡ ಇದೆ. ಮೂರು ನಿಮಿಷ ವಾಸನೆಯೊಳಗೆ ನಿಲ್ಲಬೇಕು. ಅಲ್ಲೇ ದಿನವಿಡೀ ನಿಲ್ಲುವ ಟ್ರಾಫಿಕ್‌ ಪೊಲೀಸ್‌ ಗತಿ ಏನಾಗಿರಬೇಕು ಊಹಿಸಿ.
ಈ ಕುರಿತು ಆತನನ್ನು ಸಾರ್ವಜನಿಕರು ಕೇಳಿದ್ದಕ್ಕೆ, `ಈ ದರಿದ್ರ ವಾಸನೆ ಕುಡಿದು ನನ್ನ ಮೂಗೇ ಹಾಳಾಗಿ ಹೋಗಿದೆ. 20 ದಿನ ಆಯ್ತು. ಮೂಗಿಗೆ ಕ್ಯಾಪ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ಹಾದು ಹೋಗುವ ಜನರೆಲ್ಲಾ ನನ್ನನ್ನ ಕೇಳ್ತಾರೆ. ಇದರ ಬಗ್ಗೆ ನನಗೇನು ಗೊತ್ತು. ನಾನೇನು ಕಾರ್ಪೊರೇಷನ್‌ನವನಾ' ಎಂದು ಉರಿದು ಬೀಳುತ್ತಾರೆ.
ಟ್ರಾಫಿಕ್‌ನಲ್ಲಿ ನಿಂತವರೆಲ್ಲಾ ಒಂದೊಂದು ಮಾತು. ಪಕ್ಕದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೆಟ್ರೋದಂತಹ ೃಹತ್‌ ಕಾಮಗಾರಿಯ ಮುಂದೆ ಮ್ಯಾನ್‌ಹೋಲ್‌ನಂತಹ ಪುಟ್ಟ ಕಾಮಗಾರಿ ಸಂಬಂಧಪಟ್ಟವರ ಕಣ್ಣಿಗೆ ಕಾಣಿಸುತ್ತಿಲ್ಲವೇನೋ!
ಇಲಾಖೆಯ ಸಹವಾಸವೇ ಅಲ್ಲ:


ನಗರದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್‌ ಅವರನ್ನು ಈ ಕುರಿತು ಸಂಪರ್ಕಿಸಿದಾಗ, `ಈವರೆಗೂ ಕಂಪ್ಲೇಂಟ್‌ ಬಂದಿಲ್ಲ. ನಿಮ್ಮ ಕರೆಯನ್ನೇ ದೂರು ಅಂತ ಪರಿಗಣಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ' ಎಂಬ ಭರವಸೆ ಕೊಟ್ಟು ಜಾರಿಕೊಂಡರು. ಮೆಟ್ರೋ ಕಾಮಗಾರಿಯಿಂದಾಗಿ ಕ್ರಮ ತೆಗೆದುಕೊಳ್ಳಲು ತಡವಾಗುತ್ತಿದೆಯೇ ಎಂದು ಕೇಳಿದ್ದಕ್ಕೆ, ಮೆಟ್ರೋಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಯಾರೂ ದೂರು ಸಲ್ಲಿಸದೇ ಇರುವುದರಿಂದ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಸಿದ್ಧ ಉತ್ತರ.
ಈ ಅಧಿಕಾರಿಗಳಿಗೆ ಎಂಜಿ ರಸ್ತೆಯ ಈ ಭಾಗ ಯಾವ ಸೇವಾಠಾಣೆಯ ವ್ಯಾಪ್ತಿಗೆ ಬರುತ್ತೆ ಅನ್ನೋದೇ ಗೊತ್ತಿಲ್ಲ. ಅಲ್ಲಿಗೆ ಫೋನ್‌ ಮಾಡಿ, ಇಲ್ಲಿಗೆ ಫೋನ್‌ ಮಾಡಿ ಎನ್ನುತ್ತಾ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.
ನಗರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ 110 ಸೇವಾಠಾಣೆಗಳಿವೆ. ವಿವಿಧ ಬಡಾವಣೆಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯೂ ಇದೆ. ಯಾರು ಬೇಕಾದರೂ ಕರೆ ಮಾಡಿ ದೂರು ಸಲ್ಲಿಸಬಹುದು. (Intraviros Response System 155313)
ಎಂ.ಜಿ. ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಒಡೆದ ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಇಲ್ಲಿಯವರೆಗೂ ಯಾವ ದೂರು ದಾಖಲಾಗಿಲ್ಲ ಅಥವಾ ಸಲ್ಲಿಸಿದ ದೂರನ್ನು ನಿರ್ಲಕ್ಷಿಸಿರಬಹುದು.
ನಗರದ ಹೃದಯ ಭಾಗದ ಗತಿಯೇ ಹೀಗಾದರೆ ಬೇರೆ ಹೊರ ವಲಯಗಳ ಪಾಡೇನು ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಒಟ್ಟಿನಲ್ಲಿ ವಾಸನೆ ಕುಡಿಯುವುದು ಜನರ ನಿತ್ಯ ಕರ್ಮವಾಗಿದೆ! ಸದ್ಯ ಜನರಿಗೆ ಕಾಯುವುದೇ ಕಾಯಕ.








ಊರೆಲ್ಲಾ ಅಗೆತ, ಕೊರೆತ!





ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದರೂ ಬರೀ ಅಗೆತ. ಕೊರೆತ!
ನೀರಿಗಾಗಿ, ರೋಡಿಗಾಗಿ, ಮನೆ ಮೇಲೆ ಮನೆ ಪೇರಿಸಲು, ಮಹಡಿ, ಮಹಲು, ಮೆಟ್ರೋ, ಅಂಡರ್‌ಗ್ರೌಂಡ್‌, ಕಾರಿಡಾರ್‌, ಅಡೆಗೋಡೆ, ತಡೆಗೋಡೆ, ಪ್ಲಾಂಟೇಷನ್ಸ್‌, ಯೂನಿಟ್ಸ್‌......ಭೂಮಿಯನ್ನು ಅಗೆದು ಕೊರೆದು ಕುಟ್ಟಿ ನೆಲವನ್ನು ಬಿಲ ಮಾಡಿಬಿಟ್ಟಿದ್ದಾರೆ.
ಕಾವೇರಿಯನ್ನು ಮನೆ ಮನೆಗೆ ಕರೆದುಕೊಂಡು ಹೋಗುವುದಕ್ಕೆ ಅಗೆತ. ಮನೆ ಕಟ್ಟುವುದಕ್ಕೆ ಅಗೆತ. ಕೆಡವುದಕ್ಕೂ ಅಗೆತ! ರಸ್ತೆ ಅಗಲೀಕರಣಕ್ಕೆ ಅಗೆತ ಅಗೆತ.... ಹೊಸೂರು ರಸ್ತೆಯಲ್ಲಿ ವರ್ಷಪೂರ್ತಿ ಅಗೆತ ನಡೆಯುತ್ತದೆ. ಮೈಸೂರು ರಸ್ತೆ ಕರ್ಮಕಾಂಡ! ವರ್ಷಗಳಿಂದಲೂ ಅಗಲೀಕರಣ ನಡೆಯುತ್ತಲೇ ಇದೆ. ಬಳ್ಳಾರಿ ರಸ್ತೆಯಲ್ಲಿ ಮರಗಳಿಗೆ ಉಳಿಗಾಲವಿಲ್ಲ. ತುಮಕೂರು ರಸ್ತೆಯಲ್ಲಿ ಪ್ರತಿನಿತ್ಯ ಕಾಮಗಾರಿ. ವಿಜಯ ನಗರ ಅಂಡರ್‌ಪಾಸ್‌ ಕಾಮಗಾರಿ ಕುಂಟುತ್ತಿದೆ. ರಾಜಾಜಿ ನಗರದ ಬೈಪಾಸ್‌ ಮುಗಿದಿಲ್ಲ. ಒಂದಾ ಎರಡಾ.....ಒಟ್ಟಿನಲ್ಲಿ ಭೂ ಮೇಲಿನ ದಾಳಿ ನಿರಾತಂಕವಾಗಿ ನಡೆಯುತ್ತಿದೆ.
ಕಾಮಗಾರಿಗಳನ್ನು ಮುಗಿಸಲು ಇಲಾಖೆಗಳಿಗೆ ಮನಸಿಲ್ಲ. ಡೆಡ್‌ಲೈನ್‌ಗಳು ಮುಂದಕ್ಕೆ ಹೋಗುತ್ತಲೇ ಇವೆ. ತಿಂಗಳು ಅಂದದ್ದು ವರ್ಷ ಆದರೂ ಮುಗಿಯೊಲ್ಲ. ಇತ್ತೀಚೆಗೆ ಬಿಬಿಎಂಪಿ 15 ದಿನಗಳಲ್ಲಿ ಕಾಮಗಾರಿಯೊಂದನ್ನು ಮಗಿಸುವುದಾಗಿ ಹೇಳಿ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡು ನಗೆಪಾಟಲಿಗೆ ಈಡಾಗಿತ್ತು. ಅಧಿಕಾರಿಗಳಿಗೆ ಡೆಡ್‌ಲೈನ್‌ ಪ್ರಜ್ಞಯೇ ಇಲ್ಲ.
ಅಂತರ್ಜಲ ಬತ್ತುತ್ತಿದೆ:
500 ಅಡಿ ಅಲ್ಲ, 1000 ಅಡಿ ಆದ್ರೂ ನೀರು ಬರೋ ತನಕ ಭೂಮಿ ಕೊರೆಯುವುದನ್ನು ಬಿಡದ ನಮ್ಮ ಸೂಪರ್‌ ಪಾಸ್ಟ್‌ ರಿಗ್‌ಗಳು. ಬುರುಡೇಸರ್‌ಗಳು, ಇಟಾಚಿಗಳನ್ನು ನೋಡಿದರೆ ಹೆದರಿಕೆ ಆಗುತ್ತೆ. ಬಂಡಗಲ್ಲನ್ನು ಉಡಾಸುವ ಡೈನೆಮೆಂಟ್‌ಗಳು ಭೂಮಿಯನ್ನು ಮಾತ್ರವಲ್ಲ. ಜೀವವನ್ನೂ ನಡುಗಿಸುತ್ತವೆ. ಸಣ್ಣ ಪುಟ್ಟ ರಸ್ತೆಮಾಡಲೂ ಕೊರೆತ ಇದ್ದೇ ಇದೆ. ಕೊರೆಯುವಾಗ ಬರುವ ಕಟ ಕಟ ಚಟ ಪಟ ಶಬ್ದ ಒಂದು ಕಿಮಿ ದೂರದ ನಿಶಬ್ದತೆಯನ್ನು ನುಂಗಿ ಹಾಕುತ್ತೆ. ಹೊರಹೊಮ್ಮುವ ಧೂಳು ಅಲರ್ಜಿಯಂತಹ ಖಾಯಿಲೆಗಳನ್ನು ಹೊತ್ತು ತರುತ್ತೆ.
ಈ ಅಗೆತದ ದುಷ್ಟರಿಣಾಮದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಭೂ ಕೊರೆತದಿಂದ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಭೂಮಿ ಸಡಿಲಗೊಂಡಾಗ ಅಂತರ್ಜಲ ಬತ್ತಿ ಹೋಗುತ್ತದೆ. ಮೊದಲೆಲ್ಲಾ ನೂರರಿಂದ ಇನ್ನೂರು ಅಡಿ ಕೊರೆದರೆ ಅಂತರ್ಜಲ ಸಿಗುತ್ತಿತ್ತು. ಇವತ್ತು ಐನೂರು ಅಡಿ ಕೊರೆದರೂ ನೀರು ಹನಿಯುವುದಿಲ್ಲ. ಅಗೆತದಿಂದ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಸ್ಥಳೀಯರು ಬಹಳ ಕಿರಿಕಿರಿ ಅನುಭವಿಸಬೇಕು. ಕೊರೆದ ಬಾವಿಯನ್ನು ಮುಚ್ಚದಿದ್ದಾಗ ಇನ್ನೊಂದು ಗಂಭೀರ ಸಮಸ್ಯೆ.
ನಗರಾಭಿವೃದ್ಧಿ:

ಪರದೇಸಿಗಳು ಸುಳಿದಾಡುವ ಈ ಇಂಟರ್‌ನ್ಯಾಷನಲ್‌ ಫೇಮಸ್‌ ಊರಿನಲ್ಲಿ ಉದ್ದದ ಅಗಲದ ರಸ್ತೆ ಇಲ್ಲದಿದ್ದರೆ ಹೇಗೆ? ಎತ್ತರದ ಮಹಡಿ ಮಹಲುಗಳಿಲ್ಲದಿದ್ದರೆ ಹೇಗೆ? ನಗರಾಭಿವೃದ್ಧಿಗೆ ಇವೆಲ್ಲಾ ಬೇಡವೇ?
ಇವೆಲ್ಲಾ ಬೇಕು ನಿಜ. ಆದರೆ ಅದರಿಂದಾಗುವ ದುಷ್ಟರಿಣಾಮಗಳ ಬಗ್ಗೆಯೂ ಯೋಚಿಸಬೇಕು.
ಯಾವುದೇ ಅಪಾರ್ಟ್‌ಮೆಂಟ್‌ ನೋಡಿ. ಪಾರ್ಕಿಂಗ್‌ ಜಾಗ ಅಂಡರ್‌ಗ್ರೌಂಡ್‌ನಲ್ಲಿರುತ್ತದೆ. ಮೊದಲೇ ಬಹುಮಹಡಿ ಕಟ್ಟಡ. ಅಡಿಪಾಯಕ್ಕೆಂದೇ ಮೀಟರ್‌ಗಟ್ಟಲೇ ಕೊರೆದಿದ್ದಾಗಿದೆ. ಪಾರ್ಕಿಂರ್ಗ ಜಾಗಕ್ಕೆ ಮತ್ತೂ ಕೊರೆಯುವುದು. ಇದು ದೊಡ್ಡ ಬಿಸಿನೆಸ್‌.
ಭೂಮಿ ಶೋಷಣೆಯ ವಸ್ತು:
ಈ ಊರಲ್ಲಿ ಭೂಮಿ ಬಂಗಾರ ಅಂತ ಎಲ್ಲರಿಗೂ ಗೊತ್ತು. ಅದರ ಜೊತೆಗೆ ಭೂಮಿ ಶೋಷಣೆಯ ವಸ್ತು. ಪರಿಸರ ತಜ್ಞರು ಬೆಂಗಳೂರಿನ ನಗರಾಭಿವೃದ್ಧಿ ಯೋಜನಗಳ ಬಗ್ಗೆ ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ರಸ್ತೆ ಅಗೆತ, ಬಡಾವಣೆ ನಿರ್ಮಾಣ, ಕೈಗಾರಿಕೆ ನಿರ್ಮಾಣದಂತಹ ಕಾರ್ಯಗಳನ್ನು ಜಾರಿಗೊಳಿಸುವಾಗ ಪರಿಸರ ರಕ್ಷಣೆಯ ಕ್ರಮ ಕೈಗೊಳ್ಳುಬೇಕು ಎಂಬುದು ಅವರ ಒತ್ತಾಯ.
ಪರಿಸರ ಕಮಿಟಿ ರಚನೆ:

ಪರಿಸರ ತಜ್ಞರು ಬಹಳ ದಿನಗಳಿಂದ ಸರ್ಕಾರದ ಮುಂದೆ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಒಂದು ಯೋಜನೆಯನ್ನು ಜಾರಿಗೊಳಿಸುವಾಗ ಆ ಯೋಜನೆಯ ಸಾಧಕ ಬಾಧಕಗಳು, ಪರಿಸರದ ಮೇಲೆ ಯೋಜನೆಯ ಪರಿಣಾಮಗಳನ್ನು ನಿರ್ಧರಿಸಲು ಪರಿಸರವಾದಿಗಳ ಕಮಿಟಿ ರಚಿಸಬೇಕು ಎಂಬ ಒತ್ತಾಯ ಇದೆ. ಸರ್ಕಾರದ ಭರವಸೆಯೂ ಇದೆ. ಭರವಸೆ ಈಡೇರಿಲ್ಲ ಅಷ್ಟೆ. ಕೆಲವೊಂದು ಯೋಜನೆಗಳಿಗೆ ಕಮಿಟಿಗಳು ರಚನೆಯಾಗಿದ್ದವು. ಆದರೆ ಈಗ ಆ ಕಮಿಟಿಗಳು ಜೀವಂತವಾಗಿಲ್ಲ.
ಖಾಸಗಿ ಕಾರಿಡಾರ್‌ ಯೋಜನೆಗಳನ್ನು ಜಾರಿಗೊಳಿಸುವಾಗ ಅದರಿಂದಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನವನ್ನು( Environmental Impact Assessment) ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅಥವಾ ರಾಜ್ಯ ಪರಸರ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು. ಆದರೆ ಇದೊಂದು ದೊಡ್ಡ ಮೋಸ. ಅಧ್ಯಯನದಲ್ಲಿ ಒಂದು ಇದ್ದರೆ, ಯೋಜನೆ ಜಾರಿಗೊಂಡಾಗ ಇನ್ನೊಂದು ಇರುತ್ತದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಗೆತಗಳಿಗೆ ಅವೈಜ್ಞಾನಿಕ ಯೋಜನೆಗಳು, ಇಲಾಖೆಗಳ ಅಧಿಕಾರಿಗಳ ಸೋಮಾರಿತನ, ರಾಜಕಾರಣಿಗಳ ಹೊಟ್ಟೆಬಾಕತನವೇ ಕಾರಣ. ಅಧಿಕಾರಿಗಳು ಪರಿಸರ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಮಂಡಳಿಗೆ ವರದಿಗಳನ್ನು ಮಾತ್ರ ರವಾನಿಸುತ್ತಿದೆ. ಮಾಲಿನ್ಯ ಮಾತ್ರ ನಿಯಂತ್ರಣದಲ್ಲಿ ಇಲ್ಲ.
ಸರ್ಕಾರದ ಅಭಿವೃದ್ಧಿ ಮಂತ್ರದಲ್ಲಿ ಪರಿಸರ ಕಾಳಜಿ ಎಳ್ಳಷ್ಟೂ ಇಲ್ಲ. ಹೀಗಾದ್ರೆ ಜೀವ ವೈವಿಧ್ಯವನ್ನು ಕಾಯುವ ಭೂಮಿಯನ್ನು ಕಾಯುವವರು ಯಾರು?

ಮಂಗಳವಾರ, ಅಕ್ಟೋಬರ್ 14, 2008



























ಗುಳೇ ಹೊರಟ ರೈತನ ಗೋಳಿನ ಕತೆ!

Inhuman environment

ಬೆಂಗ­ಳೂರು ರೈಲು­ನಿ­ಲ್ದಾಣ ಪ್ಲಾಟ್‌­ಫಾರಂ ಸಂಖ್ಯೆ ಎಂಟು.
ಪಕೀ­ರಪ್ಪ, ರಾಜಣ್ಣ, ಲಿಂಗಪ್ಪ ಮತ್ತು ದುರ್ಗವ್ವ ಮುಂತಾ­ದ­ವರು `ರಾಣಿ ಚೆನ್ನಮ್ಮ ಎಕ್ಸ್‌­ಪ್ರೆಸ್‌' ರೈಲು­ಗಾ­ಡಿಗೆ ಕಾಯುತ್ತಾ ನಿಂತಿ­ದ್ದರು. ಯಾರ ಕಣ್ಣಲ್ಲೂ ಕಳೆ ಇರ­ಲಿಲ್ಲ. ಈ ಮಾಯಾ ನಗರಿ ಬೆಂಗ­ಳೂ­ರಿ­ನಲ್ಲಿ ನಮ್ಮ ಬದು­ಕಿಗೆ ಆಸ­ರೆ­ಯಾ­ಗ­ಬಲ್ಲ ಒಂದು ಚಾಕರಿ ದೊರೆ­ತೀತು ಎಂಬ ಉತ್ಸಾ­ಹ­ದಿಂದ ಮಕ್ಕಳು ಮರಿ­ಯನ್ನು ಕಟ್ಟಿ­ಕೊಂಡು ಬಂದ ನಿರೀಕ್ಷೆ ಬೊಗೆ­ಯಷ್ಟೂ ಈಡೇ­ರಿ­ರ­ಲಿಲ್ಲ. ಕೆಲ­ಸ­ಕ್ಕಾಗಿ ಕಾದು ಬೆಂಡಾಗಿ ಹೈರಾ­ಣಾಗಿ ಬಂದ ಹಾದಿಗೆ ಸುಂಖ­ವಿಲ್ಲ ಎಂಬಂತೆ ತಮ್ಮೂ­ರಿಗೆ ಹೊರಟು ನಿಂತಿ­ದ್ದರು.
ರಸ­ಗೊ­ಬ್ಬ­ರದ ಫ್ಲಾಸ್ಟಿಕ್‌ ಚೀಲ­ದಲ್ಲಿ ತುಂಬಿದ್ದ ಪಾತ್ರೆ­ಪ­ಗ­ಡೆ­ಗಳ ಗಂಟು­ಮೂ­ಟೆ­ಗ­ಳನ್ನು ಪಕ್ಕ­ದ­ಲ್ಲಿ­ಟ್ಟು­ಕೊಂಡು ಕುಳಿ­ತಿದ್ದ ಹೆಂಗ­ಸರು ತನ್ನೂ­ರಿನ ಹಾದಿ­ಯ­ನ್ನೆ­ಣಿ­ಸು­ತ್ತಿ­ದ್ದರು. ಯಾವು­ದರ ಪರಿವೇ ಇಲ್ಲದೆ ಬಂದು ಹೋಗು­ತ್ತಿದ್ದ ರೈಲಿನ ಜುಕ್‌­ಜುಕ್‌ ಶಬ್ದಕ್ಕೆ ಸ್ಪಂಧಿ­ಸು­ತ್ತಿದ್ದ ಮಕ್ಕಳು, ನಿಲ್ದಾ­ಣದ ಕಪ್ಪು­ಕೋಟು ಮಾಸ್ಟ­ರನ ಘರ್ಜ­ನೆಗೆ ಬೆದ­ರಿ­ದ್ದವು. ಅಕ್ಕ­ಪ­ಕ್ಕ­ದಲ್ಲಿ ಸಾಗು­ತ್ತಿದ್ದ ಸೂಟು­ಬೂ­ಟು­ಧಾ­ರಿ­ಗಳ ತಾತ್ಸಾ­ರದ ನೋಟ, ಪಾಪ! ಇವರ ಅರಿ­ವಿಗೆ ಬಂದಿ­ರ­ಲಿಲ್ಲ.
ಪ್ಲಾಟ್‌­ಫಾರಂ ತುಂಬಿ ತುಳು­ಕು­ತ್ತಿತ್ತು. ರೈಲು ಬಂದೊ­ಡನೆ ಪ್ಯಾಸೆಂ­ಜರ್‌ ಬೋಗಿಯ ಕಡೆಗೆ ಆಕ್ರ­ಮ­ಣ­ಕಾ­ರ­ರಂತೆ ನುಗ್ಗಿ­ದರು. ಕ್ಷಣ­ಮಾ­ತ್ರ­ದಲ್ಲಿ ರೈಲು ತನ್ನ ಸಾಮ­ರ್ಥ್ಯ­ವನ್ನು ಮೀರಿ ತುಂಬಿ­ಸಿ­ಕೊಂಡು ಹೊರ­ಟಿತು.
`ಈ ನಗ­ರಕ್ಕೆ ನಾವು ಯೋಗ್ಯ­ರಲ್ಲ' ಎಂಬಂತೆ ಹಿಂದೆ ಸಾಗು­ತ್ತಿದ್ದ ಬೆಂಗ­ಳೂರು ಮಹಾ­ನ­ಗ­ರಕ್ಕೆ ಕಡೆಯ ನಮ­ಸ್ಕಾರ ತಿಳಿ­ಸಿ­ದರು.

ಇವ­ರೆಲ್ಲಾ ಯಾರು?:

`ಬ್ಯಾರೆ­ಯ­ವರ ಹೊಲ­ದಾಗೆ ದಿನ­ಗೂಲಿ ಮಾಡ್ಕೊಂಡ್‌ ಚಲೋ­ಗಿ­ದ್ದಿನ್ರೀ. ಒಪ್ಪತ್ತು ಊಟಕ್ಕೆ ಕಷ್ಟ ಆಗ್ತಿ­ದ್ದಿಲ್ಲ. ಯಾರದೋ ಮಾತ್‌ ಕೇಳ್ಕಂಡು, ಚಿಲ್ಲರೆ ಕಾಸಿನ ಹುಚ್ಚು ಹತ್ತಿ­ಸ್ಕಂಡ್‌ ಇಲ್ಲಿಗೆ ಬಂದೆನ್ರಿ. ಈ ಮಂದಿ ಕೆಲಸ ಕೊಡ್ತಾ­ರೇನು? ನಮ್ಮ ರಕ್ತ ಹೀರ್ತಾರೆ. ಆದಕ್ಕಾ ನಾ ನಮ್ಮೂ­ರಿಗೆ ಹೊರಟು ನಿಂತನ್ರಿ' ಎಂದು ನಿರಾ­ಶೆ­ಯಿಂದ ನುಡಿ­ಯು­ತ್ತಾರೆ ದಾರ­ವಾಢ ಜಿಲ್ಲೆಯ ಭೂ ರಹಿತ ಕೃಷಿ ಕಾರ್ಮಿಕ ಪಕೀ­ರಪ್ಟ.
ರಾಯ­ಚೂ­ರಿನ ಯಲ್ಲ­ಪ್ಪ­ರಿಗೆ ಎರಡು ಎಕರೆ ಭೂಮಿ ಇದೆ, ತನ್ನ ಅವಿ­ಭಕ್ತ ಕುಟುಂ­ಬಕ್ಕೆ ಸಾಕಾ­ಗು­ವಷ್ಟು ಬೆಳೆ ಬರದು. ಮಳೆ ಬಿದ್ದರೆ ಮಾತ್ರ ಬೆಳೆ. ಕೆಲ­ಸ­ಕ್ಕಾಗಿ ಸಾಲ ಮಾಡಿ­ಕೊಂಡು ಬೆಂಗ­ಳೂ­ರಿಗೆ ಬಂದು ತಿಂಗ­ಳು­ಗ­ಟ್ಟಲೇ ತಡ­ಕಿ­ದರೂ ಕೆಲಸ ಸಿಕ್ಕಿಲ್ಲ. ಕಡೆಗೆ ಸಾಲದ ದುಡ್ಡು ಖಾಲಿ­ಯಾ­ದಾಗ ವಿದಿ­ಯಿ­ಲ್ಲದೆ ತಮ್ಮೂ­ರಿಗೆ ಹೊರಟು ನಿಂತಿ­ದ್ದಾರೆ.
ಇವ­ರೆಲ್ಲಾ ಉತ್ತರ ಕರ್ನಾ­ಟ­ಕದ ಹಳ್ಳಿ­ಗ­ಳಿಂದ ಬೆಂಗ­ಳೂ­ರಿಗೆ ಗುಳೇ­ಬಂದ ಜನ. ಕೆಲ­ಸ­ಕ್ಕಾಗಿ ಮಕ್ಕಳು ಮರಿ ಕಟ್ಟಿ­ಕೊಂಡು ದಿನ­ನಿತ್ಯ ನಗ­ರ­ಗ­ಳಿಗೆ ಬಂದಿ­ಳಿ­ಯು­ತ್ತಾರೆ. ಅದೆಷ್ಟು ಜನ­ರನ್ನು ತುಂಬಿ­ಕೊ­ಳ್ಳಲು ಸಾಧ್ಯ?

ಅಳಿ­ಯದ ಸಣ್ಣ ರೈತನ ಗೋಳು: ಇದು ಬರೀ ಪಕೀ­ರಪ್ಪ, ಯಲ್ಲ­ಪ್ಪರ ಕತೆ­ಯಲ್ಲ. ಕೆಲ­ಸ­ಕ್ಕಾಗಿ ಪಟ್ಟ­ಣ­ಗ­ಳಿಗೆ ಗುಳೇ ಹೊರಟ ಗ್ರಾಮೀಣ ಭಾರ­ತೀ­ಯರ ಗೋಳಿನ ಕತೆ. ಉತ್ತರ ಕರ್ನಾ­ಟ­ಕದ ಹಳ್ಳಿ­ಗ­ಳಿಂದ ಬೆಂಗ­ಳೂ­ರಿಗೆ ಗುಳೇ ಹೊರಟು ತಂಡೋಪ ತಂಡ­ವಾಗಿ ಬರು­ತ್ತಿದ್ದು, ಕೆಲಸ ಸಿಗದೇ ಹಾಗೆಯೇ ಹಿಂತಿ­ರು­ಗು­ತ್ತಿ­ದ್ದಾರೆ.
ಶೇ. 70ರಷ್ಟು ಭಾರ­ತೀ­ಯರು ತಮ್ಮ ಜೀವ­ನೋ­ಪಾ­ಯಕ್ಕೆ ವ್ಯವ­ಸಾ­ಯ­ವನ್ನೇ ಅವ­ಲಂ­ಭಿ­ಸಿ­ದ್ದರೂ, ಅವರ ಜೀವನ ನಡೆ­ಯು­ತ್ತಿಲ್ಲ. ಇವ­ರಲ್ಲಿ ಶೇ. 90ರಷ್ಟು ಮಂದಿ ಸಣ್ಣ ಮತ್ತು ಅತೀ ಸಣ್ಣ ರೈತ­ರಾ­ಗಿ­ದ್ದಾರೆ. ಎಲ್ಲ­ದಕ್ಕೂ ಸಾಲ, ಸಾಲ­ವಿ­ಲ್ಲದೆ ಮಣ್ಣಿನ ಮಗನ ಬದು­ಕಿಲ್ಲ. ಸಾಲ­ದ­ಲ್ಲಿಯೇ ಹುಟ್ಟಿ, ಸಾಲ­ದ­ಲ್ಲಿಯೇ ಬದುಕಿ, ಸಾಲ­ದ­ಲ್ಲಿಯೇ ಕಡೆ­ಯಾ­ಗು­ತ್ತಿ­ದ್ದಾನೆ.
ಇಂತಹ ವಿಷಮ ಪರಿ­ಸ್ಥಿ­ತಿ­ಯಲ್ಲಿ ಮಣ್ಣಿನ ಮಕ್ಕಳು ಮಣ್ಣಿನ ಮೇಲೆ ನಂಬಿಕೆ ಕಳ­ಕೊಂ­ಡ­ವ­ರಂತೆ ಹಳ್ಳಿ­ಬಿಟ್ಟು ನಗ­ರ­ಗ­ಳಿಗೆ ಕೆಲಸ ಅರ­ಸಿ­ಕೊಂಡು ಬರು­ತ್ತಿ­ದ್ದಾರೆ.

ಮಕ್ಕ­ಳನ್ನು ಬಿಕ್ಷೆಗೆ ಬಿಟ್ಟರು: ಅಪ್ಪ­ನಿಗೆ ಕೆಲ­ಸ­ವಿಲ್ಲ, ಅವ್ವ­ನಿಗೆ ಗಂಜಿ ಕಾಸಲು ಕಾಳಿಲ್ಲ, ಉಪ್ಪಿಲ್ಲ. ಇರು­ವುದು ಒಂದೇ ಒಂದು ದಾರಿ. ತಮ್ಮ ಮಗು­ವನ್ನು ಬಿಕ್ಷೆಗೆ ಬಿಡು­ವುದು. ಬೆಳ­ಗ್ಗೆ­ಯಿಂದ ಸಂಜೆ­ಯ­ವ­ರೆಗೆ ಬಿಕ್ಷೆ ಬೇಡಿ ತರುವ ಪುಡಿ­ಗಾ­ಸಿ­ನಿಂದ ಒಪ್ಪೊ­ತ್ತಿನ ಊಟ.
ಟ್ರಾಫಿಕ್‌ ಸಿಗ್ನ­ಲ್‌­ಗ­ಳಲ್ಲಿ ದೇವ­ಸ್ಥಾ­ನದ ಬಾಗಿ­ಲು­ಗ­ಳಲ್ಲಿ, ಮಾರು­ಕ­ಟ್ಟೆ­ಗ­ಳಲ್ಲಿ ಬಿಕ್ಷೆ ಬೇಡುವ ಮಕ್ಕ­ಳನ್ನು ಯಾವ ಊರು ಎಂದು ಕೇಳಿ­ದರೆ ಉತ್ತರ ಕರ್ನಾ­ಟ­ಕದ ಊರು­ಗಳ ಹೆಸ­ರು­ಗ­ಳ­ನ್ನೇ­ಳು­ತ್ತಾರೆ. ದಿಕ್ಕು­ದೆ­ಸೆ­ಯಿ­ಲ್ಲದೆ ನಗ­ರ­ಗ­ಳಿಗೆ ಬರು­ತ್ತಾರೆ. ಸಿಕ್ಕ­ಸಿ­ಕ್ಕ­ವ­ರಲ್ಲಿ ಕೆಲಸ ಕೊಡಿ ಎಂದು ಗೋಗ­ರಿ­ಯು­ತ್ತಾರೆ. ಸಿಗ­ದಿ­ದ್ದಾಗ ಕೆಲ­ವರು ಹಿಂತಿ­ರುಗಿ ಹೋದರೆ, ಮತ್ತೆ ಕೆಲ­ವರು ಕಳ್ಳ­ತ­ನ­ಗ­ಳಂ­ತಹ ಕೆಲ­ಸಕ್ಕೂ ಕೈ ಹಾಕು­ತ್ತಾರೆ. ಇತ್ತೀ­ಚೆಗೆ ಬೆಂಗ­ಳೂ­ರಿ­ನಲ್ಲಿ ಬಂಧಿ­ತ­ರಾ­ಗು­ತ್ತಿ­ರುವ ವಿಚಾ­ರ­ಣಾ­ಧೀನ ಕೈದಿ­ಗ­ಳಲ್ಲಿ ಗುಳೇ ಬಂದ ವಲ­ಸಿ­ಗರೇ ಹೆಚ್ಚು ಎನ್ನ­ಲಾ­ಗಿದೆ.

ವಲ­ಸಿ­ಗರ `ಯೋಗ್ಯತೆ'ಯ ಸಮಸ್ಯೆ: ಇನ್ನೊಂದು ಮುಖ್ಯ­ವಾದ ಸಮ­ಸ್ಯೆ­ಯೆಂ­ದರೆ `ಗುಳೇ ಬಂದ­ವರ ಯೋಗ್ಯತೆ'ಯ ಸಮಸ್ಯೆ. ಗುಳೇ ಬಂದ ಗ್ರಾಮೀಣ ಭಾರ­ತೀ­ಯ­ರಿಗೆ ಇನ್ಫೋ­ಸಿ­ಸ್‌­ನಲ್ಲಿ ಕೆಲಸ ಸಿಗು­ವು­ದಿಲ್ಲ. ಅವರು ಕಟ್ಟ­ಡದ ಕೆಲ­ಸಕ್ಕೆ ಸೇರ­ಬೇಕು ಇಲ್ಲವೇ ಹೋಟೆಲ್‌ ಮಾಣಿ­ಗ­ಳಾ­ಗ­ಬೇಕು. ಇಷ್ಟು ಬಿಟ್ಟರೆ ಮತ್ತ್ಯಾವ ಕೆಲ­ಸವೂ ಸಿಕ್ಕು­ವು­ದಿಲ್ಲ.
ವಲ­ಸಿ­ಗ­ರಲ್ಲಿ ಹೆಚ್ಚಿ­ನ­ವರು ಅವಿ­ದ್ಯಾ­ವಂ­ತರೇ ಆಗಿ­ರು­ರು­ವು­ದ­ರಿಂದ ಬೇರೆ ಆಯ್ಕೆ­ಗಳೇ ಇರು­ವು­ದಿಲ್ಲ. ಕಟ್ಟಡ ಮತ್ತು ರಸ್ತೆ ಕಾಮ­ಗಾ­ರಿ­ಗ­ಳಲ್ಲೂ ಕೆಲಸ ಸಿಗು­ವುದು ಕಷ್ಟ. ಸಿಕ್ಕರೂ ಶ್ರಮಕ್ಕೆ ತಕ್ಕ ಪ್ರತಿ­ಫ­ಲ­ವಿಲ್ಲ. ಕೂಲಿ ವಸೂಲಿ ಮಾಡು­ವ­ಷ್ಟ­ರಲ್ಲಿ ಪ್ರಾಣ ಹೋಗಿ­ರು­ತ್ತದೆ.

ಮಹಿ­ಳೆಯ ಕತೆ ಶೋಚ­ನೀಯ: ಗುಳೇ ಬಂದ ಮಹಿ­ಳೆಯ ಸ್ಥಿತಿ ಹೇಳ­ತೀ­ರದು. ಆಕೆ ಎಲ್ಲಾ ಹಂತ­ದಲ್ಲೂ ಶೋಷ­ಣೆಯ ಬಲಿ­ಪಶು. ಕೆಲಸ ಅರಸಿ ಬಂದ ಅದೆಷ್ಟೋ ಮಹಿ­ಳೆ­ಯರು ಲೈಂಗಿಕ ಕಾರ್ಯ­ಕ­ರ್ತ­ರಾಗಿ ಬದ­ಲಾದ ಹಲವು ಉದಾ­ಹ­ರ­ಣೆ­ಗ­ಳಿವೆ. ಒಂದು ಅಂದಾ­ಜಿನ ಪ್ರಕಾರ ವಲ­ಸಿ­ಗ­ರಲ್ಲಿ ಹೆಚ್ಚಿನ ಜನಕ್ಕೆ ಏಡ್ಸ್‌ ರೋಗ­ವಿದೆ.
ವಲ­ಸಿ­ಗ­ರಿಗೆ ಭದ್ರ­ತೆ­ಯಿ­ದೆಯೇ? ವಸತಿ, ಆರೋಗ್ಯ, ಶಿಕ್ಷಣ ಎಲ್ಲವೂ ಶೂನ್ಯ. ಕೊಳಚೆ ಪ್ರದೇ­ಶ­ಗಳೇ ಅವರ ವಾಸ­ಸ್ಥಾನ. ಬೆಂಗ­ಳೂ­ರಿನ ಹೊರ­ವ­ಲ­ಯದ ಕೆ.ಆರ್‌. ಪುರಂ, ಕೆಂಗೇರಿ, ನಾಯಂ­ಡ­ಹಳ್ಳಿ, ಕಮಲಾ ನಗರ, ಕುರು­ಬ­ರ­ಹಳ್ಳಿ ಮುಂತಾದ ಬಡಾ­ವ­ಣೆ­ಗಳ ಕೊಳಚೆ ಪ್ರದೇ­ಶ­ಗ­ಳಲ್ಲಿ ಹೆಚ್ಚಾಗಿ ವಲ­ಸಿ­ಗರು ಕಾಣ­ಸಿ­ಗು­ತ್ತಾರೆ. ಇವ­ರಿಗೆ ಬೇರೆ ಆಯ್ಕೆ­ಗಳೇ ಇಲ್ಲ­ದಿ­ರು­ವು­ದ­ರಿಂದ ಸಮ­ಸ್ಯೆ­ಗ­ಳೆಗೆ ಅಂಟಿ­ಕೊಂಡು ಬದು­ಕು­ವಂ­ತಾ­ಗಿದೆ.

ವಲಯ ಬದ­ಲಾ­ವಣೆ ಪ್ರಯೋಗ: ಭಾರ­ತಕ್ಕೆ ಅಂಟಿದ ಬಲು­ದೊಡ್ಡ ತಲೆ­ನೋವು ವಲಸೆ. ಇದಕ್ಕೆ ದೊಡ್ಡ ಇತಿ­ಹಾ­ಸವೇ ಇದೆ. ಆದರೂ, ವಲಸೆ ಬಗೆ­ಹ­ರಿ­ಯದ ಸಮ­ಸ್ಯೆ­ಯೇನೂ ಅಲ್ಲ. ಭಾರ­ತೀಯ ಕಾರ್ಪೊ­ರೇಟ್‌ ವಲಯ ಇತ್ತೀ­ಚೆಗೆ ಒಂದು ನಿಲು­ವನ್ನು ಪ್ರತಿ­ಪಾ­ದಿ­ಸಿದೆ. `ಕೃಷಿ­ಕ­ರನ್ನು ಕೃಷಿ ವಲ­ಯ­ದಿಂದ ಉತ್ಪನ್ನ ಮತ್ತು ತಂತ್ರ­ಜ್ಞಾನ ವಲ­ಯಕ್ಕೆ ಕೊಂಡೊ­ಯ್ಯು­ವು­ದ­ರಿಂದ ಕೆಲಸ ಅರೆ­ಸುತ್ತಾ ಪಟ್ಟಣ ಸೇರು­ವು­ದನ್ನು ತಪ್ಪಿ­ಸ­ಬ­ಹುದು' ಎನ್ನ­ಲಾ­ಗಿದೆ. ಇದು ಚೀನಾದ ಯಶಸ್ವಿ ಪ್ರಯೋಗ. ಚೀನಾ­ದಲ್ಲಿ ಕಳೆದ ಒಂದು ದಶ­ಕ­ದಲ್ಲಿ 150 ಮಿಲಿ­ಯನ್‌ ಜನರು ಕೃಷಿ ವಲ­ಯ­ದಿಂದ ಉತ್ಪನ್ನ ವಲ­ಯಕ್ಕೆ ಜಿಗಿ­ದಿ­ದ್ದಾರೆ.
ಈ ಪ್ರಯೋಗ ಭಾರ­ತ­ದಲ್ಲೂ ಸಾಧ್ಯ­ವಿದೆ. ಆದರೆ ಇದು ಫಲ­ಪ್ರ­ದ­ವಾ­ಗ­ಬೇ­ಕಾ­ದರೆ ಶತ­ಕ­ಗಳೇ ಬೇಕು. ಅದಕ್ಕೂ ಮುಂಚೆ ಕೆಲ ಪೂರ್ವ­ಸಿ­ದ್ದ­ತೆ­ಗಳು ಜರೂ­ರಾಗಿ ನಡೆ­ಯ­ಬೇ­ಕಿದೆ. ಅವಿ­ದ್ಯಾ­ವಂತ ಗ್ರಾಮೀಣ ಭಾರ­ತೀ­ಯರು ಕೃಷಿ­ಯ­ಲ್ಲದ ವೃತ್ತಿ­ಪರ ಚಟಿ­ವ­ಟಿ­ಕೆ­ಗ­ಳಲ್ಲಿ ತೊಡ­ಗ­ಬೇಕು. ಎಲ್ಲ­ಕ್ಕಿಂತ ಮಿಗಿ­ಲಾಗಿ ಭಾರ­ತದ `ಅಪ್ರ­ಸ್ತುತ ಶೈಕ್ಷ­ಣಿಕ ವ್ಯವಸ್ಥೆ' ಬದ­ಲಾ­ಗ­ಬೇಕು. ತಮ್ಮ ಮಕ್ಕ­ಳಿಗೆ ವೃತ್ತಿ­ಪರ ಶಿಕ್ಷಣ ಪಡೆ­ಯು­ವಂತೆ ಪ್ರೇರೇ­ಪಿ­ಸ­ಬೇಕು. ಆನಂ­ತರ ಈ ಪ್ರಯೋ­ಗ­ದಂತೆ ವ್ಯಕ್ತಿ ಉತ್ಪನ್ನ ವಲ­ಯದ ಅಂಗ­ವಾ­ಗ­ಬೇಕು. ಯಾವ ಪೂರ್ವ ತಯಾ­ರಿಯೂ ಇಲ್ಲದೆ ಇದನ್ನು ಪ್ರಯೋ­ಗಿ­ಸಿ­ದರೆ ಮತ್ತೊಂದು ಸಮಸ್ಯೆ ಉದ್ಬ­ವಿ­ಸುವ ಅಪಾ­ಯ­ವಿದೆ.

ಹಳ್ಳಿ­ಗ­ಳಲ್ಲಿ ಉದ್ಯೋಗ ಸೃಷ್ಟಿ: ಸಂಘ ಜೀವಿ ಮನು­ಷ್ಯ­ನಿಗೆ ತನ್ನ ಬದು­ಕಿಗೆ ಆಧಾ­ರ­ವಾ­ಗಿ­ರುವ ಮೂಲ ಅವ­ಶ್ಯ­ಕ­ತೆ­ಗಳು ಅತೀ­ಮುಖ್ಯ. ಗೌರ­ವಾ­ನ್ವಿತ ಬದುಕು ಅವನ ಪ್ರಧಾನ ಗುರಿ. ಅದ­ಕ್ಕಾಗಿ ಆಹಾರ ಭದ್ರತೆ, ವಸತಿ, ಶಿಕ್ಷಣ ಆರೋಗ್ಯ ಎಲ್ಲವೂ ಬೇಕು. ಹಾಗಾ­ದರೆ, ಹಳ್ಳಿ­ಗ­ಳಲ್ಲಿ ಇವೆ­ಲ್ಲವೂ ಸಿಗು­ವು­ದಿ­ಲ್ಲವೆ? ಕೃಷಿ­ಯಲ್ಲಿ ಬದುಕೇ ಇಲ್ಲವೆ?.....ಹಳ್ಳಿ­ಗ­ಳಲ್ಲಿ ಇವೆ­ಲ್ಲ­ವನ್ನು ಸೃಷ್ಟಿ­ಸ­ಬೇ­ಕಾದ ಅವ­ಶ್ಯ­ವಿದೆ.
ಕೃಷಿ­ಯಲ್ಲಿ ಬದು­ಕಿದೆ. ರಾಷ್ಟ್ರದ ರಾಷ್ಟ್ರೀಯ ಆದಾ­ಯ­ದಲ್ಲಿ ಕೃಷಿಯ ಪಾಲು ಗಣ­ನೀಯ. ಆದರೆ ಕೃಷಿ ಅವ­ಬಂ­ಬಿತ ಜನ­ಸಂ­ಖ್ಯೆಗೆ ಆದಾ­ಯ­ವನ್ನು ಹೋಲಿಕೆ ಮಾಡಿ­ದರೆ ಅತೀ ಕಡಿಮೆ. ಆದ್ದ­ರಿಂದ ಇಡೀ ಕೃಷಿ ವ್ಯವಸ್ಥೆ ಬದ­ಲಾ­ಗ­ಬೇ­ಕಿದೆ. ಹಳ್ಳಿ­ಗ­ಳಲ್ಲಿ ಉದ್ಯೋಗ ಸೃಷ್ಟಿ­ಯ­ಗುವ ಅವ­ಶ್ಯ­ಕ­ತೆ­ಯಿದೆ. ಪ್ರಾಚೀನ ಕಾಲದ ಕೃಷಿ ಅಭ್ಯಾ­ಸ­ಗ­ಳನ್ನು ಮೊದಲು ಕೈಬಿ­ಡ­ಬೇಕು. ಮಾರು­ಕಟ್ಟೆ ಅರಿತು ಮಾರು­ಕಟ್ಟೆ ಆಧಾ­ರಿತ ಬೇಸಾ­ಯದ ಅಗ­ತ್ಯ­ವಿದ್ದು, ಸಣ್ಣ ರೈತ­ನಿಗೆ ಬಹು­ಕಾಲ ನಿಲ್ಲುವ ರಚ­ನಾ­ತ್ಮಕ ಕೃಷಿ­ಯನ್ನು ಕಟ್ಟುವ `ಕೈ'ಗಳು ಬೇಕಾ­ಗಿವೆ.
ಗ್ರೀನ್‌ ಪೌಂಡೇ­ಶನ್‌(ಬೆಂಗ­ಳೂರು ಮೂಲದ ಎನ್‌­ಜಿಒ) ನಿರ್ದೇ­ಶಕಿ ಹೇಳು­ವಂತೆ `ಸಣ್ಣ ರೈತರು ತಮ್ಮ ಸಣ್ಣ ಹಿಡು­ವ­ಳಿ­ಯಲ್ಲಿ ಬಹು­ಬೆ­ಳೆಯ(ಅಂತರ ಬೆಳೆ) ಬೇಸಾಯ ಪದ್ಧತಿ ಅನು­ಸ­ರಿ­ಸ­ಬೇಕು. ತಮ್ಮ ಆಹಾರ ಭದ್ರ­ತೆ­ಯನ್ನು ಕಾಯ್ದು­ಕೊ­ಳ್ಳ­ಬೇ­ಕಾ­ದರೆ ಏಕ­ಬೆಳೆ ಬೇಸಾ­ಯ­ದಿಂದ ಬಹು­ಬೆಳೆ ಬೇಸಾಯ ಪದ್ಧ­ತಿ­ಯನ್ನು ಅನು­ಸ­ರಿ­ಸ­ಬೇಕು, ಇದ­ರಿಂದ ಮಾತ್ರ ವಲ­ಸೆ­ಯನ್ನು ತಪ್ಪಿ­ಸ­ಬ­ಹುದು' ಎನ್ನು­ತ್ತಾರೆ.
ಕೃಷಿ ಮತ್ತು ಗ್ರಾಮೀ­ಣಾ­ಭಿ­ವೃದ್ಧಿ ಸಂಸ್ಥೆಯ ಮುಖ್ಯಸ್ಥ ದೇಶ­ಪಾಂ­ಡೆ­ಯ­ವರು ಹೇಳು­ವಂತೆ `ರಾಷ್ಟ್ರದ ಒಟ್ಟು ಕೃಷಿ ಆದಾಯ ಕ್ಷೀಣಿ­ಸು­ತ್ತಿದ್ದು, ಬಳೆ­ಕೆ­ದಾ­ರರ ಸೂಚ್ಯಾಂಕ ದರ(ಕನ್ಸೂ­ಮರ್ಸ್‌ ಪ್ರೈಸ್‌ ಇಂಡೆಕ್ಸ್‌) ಏರು­ಗ­ತಿ­ಯ­ಲ್ಲಿದೆ. ಆದರೆ ರೈತ ಇವೆ­ರ­ಡಕ್ಕೂ ಸ್ಪಂದಿ­ಸ­ಲಾ­ರದ ಸ್ಥಿತಿ­ಯ­ಲ್ಲಿ­ದ್ದಾನೆ. ಅಂದರೆ ಆಹಾ­ರದ ಬೇಡಿ­ಕೆಗೆ ತಕ್ಕ ಪೂರೈಕೆ ರೈತ­ನಿಗೆ ಸಾಧ್ಯ­ವಾ­ಗಿಲ್ಲ' ಎನ್ನು­ತ್ತಾರೆ.

PURA ಪರಿ­ಕ­ಲ್ಪನೆ: ಗ್ರಾಮೀಣ ಭಾರ­ತೀ­ಯರು ಗುಳೇ ಹೋಗು­ವು­ದುನ್ನು ತಡೆ­ಯಲು `ಪುರ'(Providing urban fecilities in rural aria) ಎಂಬ ನೂತನ ಪರಿ­ಕ­ಲ್ಪನೆ ಇತ್ತೀ­ಚೆಗೆ ಕಾಣಿ­ಸಿ­ಕೊಂ­ಡಿದೆ. ಇದು ರಾಷ್ಟ್ರ­ಪತಿ ಡಾ. ಅಬ್ದುಲ್‌ ಕಲಾಂ ಅವರ ಕನ­ಸಿನ ಕೂಸು. ಗ್ರಾಮ­ಗ­ಳಲ್ಲೆ ನಗರ ಸೌಲ­ಭ್ಯ­ವನ್ನು ಸೃಷ್ಟಿ­ಸು­ವುದು ಈ ಪರಿ­ಕ­ಲ್ಪ­ನೆಯ ಉದ್ದೇಶ. ಕಲಾಂ ಅವರು ಹೇಳು­ವಂತೆ `ಗ್ರಾಮ ಮತ್ತು ನಗರ ಎಂಬ ಎರಡು ನದಿ­ಗ­ಳಿಗೆ ತಾಂತ್ರಿಕ ಜ್ಞಾನ ಮಾತ್ರ ಸೂಕ್ತ ಸೇತು­ವೆ­ಯಾ­ಗ­ಬ­ಲ್ಲದು. ತಾಂತ್ರಿಕ ಜ್ಞಾನ­ದಿಂದ ಮಾತ್ರ ಗ್ರಾಮ-ನಗ­ರ­ಗಳ ಭಾವೈ­ಕ್ಯ­ತೆ­ಯನ್ನು ಸೃಷ್ಟಿಸಿ ರಚ­ನಾ­ತ್ಮಕ ಅಭಿ­ವೃ­ದ್ಧಿ­ಯತ್ತ ಸಾಗ­ಬ­ಹುದು' ಎನ್ನು­ತ್ತಾರೆ.
ಈಗಾ­ಗಲೇ ಭಾರತ ಎಚ್ಚೆ­ತ್ತು­ಕೊಂ­ಡಿದ್ದು, ಹಳ್ಳಿ­ಗ­ಳಿಗೆ ಮೂಲ ಅವ­ಶ್ಯ­ಕ­ತೆ­ಗ­ಳನ್ನು ಒದ­ಗಿ­ಸುವ ನಿಟ್ಟಿ­ನಲ್ಲಿ ಗಂಭೀರ ಚಿಂತನೆ ನಡೆ­ಸಿದೆ. ಪಂಚ­ವಾ­ರ್ಷಿಕ ಯೋಜ­ನೆ­ಗ­ಳಲ್ಲಿ ಇದನ್ನು ಪ್ರಮು­ಖ­ವೆಂದು ಪರಿ­ಗ­ಣಿ­ಸ­ಲಾ­ಗಿದೆ.
1951ರಲ್ಲಿ ರಾಷ್ಟ್ರಾ­ದ್ಯಂತ 725 ಪ್ರಾಥ­ಮಿಕ ಆರೋಗ್ಯ ಘಟ­ಕ­ಗ­ಳಿ­ದ್ದವು. ಅವು­ಗಳ ಸಂಖ್ಯೆ 2004ರ ವೇಳೆಗೆ 1,68,986ಕ್ಕೆ ಏರಿವೆ. ಅದೇ­ರೀತಿ 2000ನೇ ಇಸ್ವಿ­ಯಲ್ಲಿ ಪ್ರತಿ ಕಿ.ಮಿ.ಗೆ ಶೇ. 94ರಷ್ಟು ಗ್ರಾಮೀಣ ಭಾರ­ತೀ­ಯರು ಕಿರಿಯ ಪ್ರಾಥ­ಮಿಕ ಶಾಲೆ­ಗ­ಳನ್ನು ಹೊಂದಿದ್ದು, ಪ್ರತಿ 3 ಕಿ.ಮಿ.ಗೆ ಶೇ. 85ರಷ್ಟು ಗ್ರಾಮೀ­ಣರು ಹಿರಿಯ ಪ್ರಾಥ­ಮಿಕ ಶಾಲೆ­ಗ­ಳನ್ನು ಹೊಂದಿ­ದ್ದಾರೆ. ಇವು­ಗಳ ಸಂಖ್ಯೆ ಇತ್ತೀ­ಚೆಗೆ ಹೆಚ್ಚು­ತ್ತಿದ್ದು, ಗ್ರಾಮೀ­ಣರು ತಮ್ಮ ಹಳ್ಳಿ­ಗ­ಳಲ್ಲೆ ಉಳಿ­ಯು­ವಂತೆ ಪ್ರೋತ್ಸಾ­ಹಿ­ಸು­ತ್ತಿವೆ.
`ಧಾರ­ವಾಡ ನಗ­ರ­ದಲ್ಲಿ ನಿಂತು ಕಲ್ಲೊಂ­ದನ್ನು ಮೇಲಕ್ಕೆ ಬೀಸಿ­ದಾಗ ಅದು ಸಾಹಿ­ತಿ­ಯೊ­ಬ್ಬರ ಮನೆಯ ಮೇಲೆ ಬೀಳು­ವು­ದಂತೆ. ಆದರೆ ಬೆಂಗ­ಳೂರು ನಗ­ರ­ದಲ್ಲಿ ನಿಂತು ಕಲ್ಲೊಂ­ದನ್ನು ಮೇಲಕ್ಕೆ ಬೀಸಿ­ದರೆ ಅದು ಸಾಫ್ಟ್‌­ವೇರ್‌ ಇಂಜಿ­ನಿ­ಯರ್‌ ತಲೆ ಮೇಲೆ ಬೀಳು­ತ್ತದೆ.' ಇದು ಇತ್ತೀ­ಚಿಗೆ ಹುಟ್ಟಿ­ಕೊಂಡ ಗಾದೆ ಮಾತು. ನಮ್ಮ ನಗ­ರ­ಗಳ ಸ್ಥಿತಿ ಬದ­ಲಾ­ಗಿದ್ದು, ಅವು ಗುಳೇ ಬಂದ ಗ್ರಾಮೀಣ ವಲ­ಸಿ­ಗ­ನಿಗೆ ಮುಳ್ಳಿನ ಹಾಸಿ­ಗೆ­ಯಾ­ಗಿವೆ. ಮುಳ್ಳಿನ ಮೇಲೆ ದೇಹ­ವೊ­ಡ್ಡಿದ ಆತ ಪ್ರತಿ­ನಿತ್ಯ ಗೋಳಿ­ಡು­ತ್ತಿ­ದ್ದಾನೆ.
(ಭಾರತಿ ಘನಶ್ಯಾಂ ಅವರ ಲೇಖನದಿಂದ ಪ್ರೇರಣೆ)

ಶನಿವಾರ, ಅಕ್ಟೋಬರ್ 11, 2008




ಹುಲಿರಾಯ ಮಂಗಮಾಯ....!



ಕಾಡಿನ ರಾಜ ಹುಲಿರಾಯನ ಸಂಖ್ಯೆ ದಿನೇ ದಿನೇ ಕುಗ್ಗುತ್ತಿದೆ. ಇಡೀ ಭಾರತ ದೇಶವನ್ನು ತಡಕಾಡಿದರೆ 1400ಕ್ಕಿಂತ ಹೆಚ್ಚು ಹುಲಿಗಳು ಸಿಗಲಾರವು. ಈ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲವಾಗುತ್ತಿರುವುದು ಈ ದೇಶದ ಶೇಮ್‌ ಶೇಮ್‌!
ಅತಿ ಹೆಚ್ಚು ಅಂದರೆ ಉತ್ತರ ಪ್ರದೇಶ ರಾಜ್ಯದಲ್ಲಿ 920 ಹುಲಿಗಳಿವೆ. ಅತಿ ಕಡಿಮೆ ಅಂದರೆ ಗುಜರಾತ್‌ನಲ್ಲಿ ಒಂದು ಹುಲಿ ಮಾತ್ರ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಹುಲಿಯೂ ಇಲ್ಲ.
ಹುಲಿ ಸಂರಕ್ಷಣೆ ಕುರಿತಂತೆ ಕರ್ನಾಟಕ ರಾಜ್ಯದ ಪರಿಸ್ಥಿತಿ ಪರವಾಗಿಲ್ಲ ಅನ್ನಬಹುದು. ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ವನ್ಯಜೀವಿ ಘಟಕ ಹುಲಿ ಸಂರಕ್ಷಣೆಗೆ ಹಲವು ಕಾರ್ಯಕ್ರಮ ರೂಪಿಸಿದೆ. ಒಟ್ಟು 350 ಹುಲಿಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ. ಇಲ್ಲಿ ನಾಲ್ಕು ರಾಷ್ಟ್ರೀಯ ಉದ್ಯಾನ ವನಗಳಿವೆ. ಇವುಗಳಲ್ಲಿ ನಾಗರಹೊಳೆ ಉದ್ಯಾನವನದಲ್ಲಿ 14 ಹುಲಿಗಳಿದ್ದರೆ, ಬಂಡೀಪುರ ಉದ್ಯಾನ ವನದಲ್ಲಿ 24 ಹುಲಿಗಳಿವೆ.
ಹುಲಿ ಸಂಖ್ಯೆ ಕಡಿಮೆಯಾಗುತ್ತಿರುವುದು ಇಡೀ ದೇಶವನ್ನು ಆತಂಕಕ್ಕೆ ಈಡು ಮಾಡಿದೆ. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಬಹಳ ಗಂಭೀರವಾದ ಚರ್ಚೆ ನಡೆಯುತ್ತಿದೆ.
ಮುಖ್ಯವಾಗಿ ಹುಲಿ ಸಂಖ್ಯೆ ಕ್ಷೀಣಿಸಲು ಅಕ್ರಮ ಬೇಟೆಯೇ ಕಾರಣ. ವಿದೇಶದಲ್ಲಿ ಹುಲಿಯ ಅಂಗಗಳಿಗೆ ಬಹಳ ಬೇಡಿಕೆ ಇದೆ. ಔಷಧ ತಯಾರಿಕೆಯಲ್ಲಿ ಹುಲಿ ಅಂಗಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಚೈನಾಕ್ಕೆ ಭಾರತೀಯ ಹುಲಿಗಳ ಅಂಗಗಳು ಅಕ್ರಮವಾಗಿ ರವಾನೆಯಾಗುತ್ತಿವೆ ಎಂಬ ವರದಿಯಿದೆ.
ಪ್ರಕೃತಿ ಕೂಡ ಹುಲಿ ರಕ್ಷಣೆಗೆ ಮಾರಕವಾಗಿದೆ. ಒಂದು ಪ್ರಾಣಿಯ ಆಹಾರವಾಗಿ ಇನ್ನೊಂದು ಪ್ರಾಣಿಯನ್ನು ಬಲಿಕೊಡಬೇಕು ಎಂದು ಫುಡ್‌ ಚೈನ್‌ ಹೇಳುತ್ತದೆ. ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವಂತೆ. ದೊಡ್ಡ ಹುಲಿ ಸಣ್ಣ ಹುಲಿಯನ್ನು ತನ್ನ ಹೊಟ್ಟೆಗಾಗಿ ಬಲಿಕೊಡುತ್ತಿದೆ.

ಮಂಗಳವಾರ, ಅಕ್ಟೋಬರ್ 7, 2008


ಒಡೆಯರ್‌ ಮನೆಯಲ್ಲಿ ಹುಲಿಚರ್ಮ!



ಅಂದಿನ ನಮ್ಮ ರಾಜ ಮಹಾರಾಜರು ಮೋಜಿಗಾಗಿ ಬೇಟೆ ಆಡುತ್ತಿದ್ದರು. ಮುಗ್ದ ಕಾಡು ಪ್ರಾಣಿಗಳನ್ನು ಕೊಂದು ಮನರಂಜನೆ ಪಡೆಯುತ್ತಿದ್ದರು. ಇಂದು ರಾಜರಿಲ್ಲ. ರಾಜ ವಂಶಸ್ಥರಿದ್ದಾರೆ. ಅವರಿಗೆ ಇನ್ನೂ ಪ್ರಾಣಿ ಬೇಟೆಯ ಮೇಲಿನ ಮಮಕಾರ ಕಡಿಮೆಯಾದಂತಿಲ್ಲ.
ಈ ಮೇಲಿನ ಚಿತ್ರ ನೋಡಿ. ಇದು ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಅವರ ಅರ`ಮನೆ'. ಮನೆಯ ನೆಲ ನೋಡಿ. ಹುಲಿ ಮತ್ತು ಚಿರತೆ ಚರ್ಮದ ಟೈಲ್ಸ್‌ ಅಥವಾ ಇನ್ನೇನೋ...ಹಾಕಿಸಿದ್ದಾರೆ. ಈ ಮಹಾರಾ`ಜ'ಯರಿಗೆ ಬೇರೆ ಇನ್ನೇನೂ ಸಿಗಲಿಲ್ಲವೆ? ಪ್ರಾಣಿ ಚರ್ಮವೇ ಬೇಕಿತ್ತಾ? ಈಗ ಪ್ರಾಣಿ ನಿಷೇಧ ಕಾನೂನು ಇಲ್ಲದಿದ್ದರೆ ಬಂದೂಕು ಹಿಡಿದು ಬೇಟೆಗಾಗಿ ಕಾಡಿಗೆ ಹೊರಟುಬಿಡುತ್ತಿದ್ದರೇನೋ.
ಪ್ರಾಣಿಗಳ ಚರ್ಮ ಇರೋ ಹಾಸಿನ ಮೇಲೆ ನಡೆದಾಡುವುದು ತರವೇ? ಸುಸಂಸ್ಕೃತ ವಂಶಸ್ತರಾಗಿ, ದೊಡ್ಡ ಮನುಷ್ಯರಾಗಿ ಸಣ್ಣ ವಿಷಯಗಳ ಮೇಲೆ ಸಣ್ಣತನ ತೋರುವುದು ಅವರ ಅವಲಕ್ಷಣ. ಇವರ ಕ್ರೇಜ್‌ಗಳನ್ನು ನೋಡಿದರೆ ಎಂಥವರಿಗೂ ದೊಡ್ಡಹೊಟ್ಟೆ ರಾಜನಿಗೆ ಬುದ್ಧಿ ಕಡಿಮೆ ಅನ್ಸುತ್ತೆ. ಮನೆಯಲ್ಲಿ 20ಕ್ಕೂ ಹೆಚ್ಚು ಬಿಎಂಡಬ್ಲ್ಯು ಕಾರ್‌ಗಳಿವೆಯಂತೆ. ಕುದುರೆ ಪಂದ್ಯ ಅಂದರೆ ಪ್ರಾಣವಂತೆ. ಚೆಲ್‌ ಚೆಲ್‌ ಹುಡುಗಿಯರ ಪ್ಯಾಷನ್‌ ಪಾರ್ಟಿಗಳಲ್ಲಿ ಗುಂಡು ಹಾಕೋದರಲ್ಲಿ ಇವ ಮೊದಲಿಗರಂತೆ!
ಆ ಮಲ್ಯ ಹೇಗಾದರೂ ಮಾಡಿಕೊಳ್ಳಲಿ ಸ್ವಾಮಿ. ಇವರೇನು? ಇವರ ಗೈರತ್ತುಗಳೇನು?...ಇದು ಥರವಲ್ಲ.

ಶನಿವಾರ, ಅಕ್ಟೋಬರ್ 4, 2008




























ಸುರಸುಂದರ ಬಿಳಿಸಿಂಹ!

RARE SPECIES ON THIS PLANET





ಮನುಷ್ಯ ಪ್ರಾಣಿಯ ತಲೆಯೊಳಗೆ ಬುದ್ಧಿ ಬಿಟ್ಟರೆ ಇನ್ನೇನೂ ಇಲ್ಲ! ಆದರೆ ತನ್ನನ್ನು ತಾನು ಸುರ ಸುಂದರಾಂಗ ಅಂದುಕೊಂಡಿದ್ದಾನೆ. ಇವ ನವಿಲಿಗಿಂತ ಸುಂದರನೆ? ಕತ್ರಿನಾಳಿಗಿಂತ ಕೋತಿ ಸೊಂಟವೇ ಮೇಲು!
ಅಪರೂಪ ಎನಿಸುವ ಪ್ರಾಣಿ ಜೀವಗಳು ಈ ಭೂ ಮಂಡಲದ ಮೇಲಿವೆ. ಕೆಲ ಪ್ರಾಣಿಗಳನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಈ ಬಿಳಿ ಸಿಂಹಗಳನ್ನು (ಚಿತ್ರ) ನೋಡಿ ಎಷ್ಟು ಸುಂದರವಾಗಿವೆ.
ಬಿಳಿ ಸಿಂಹಗಳು ಇಂಗ್ಲೆಂಡಿನಲ್ಲಿವೆ. ಇವುಗಳಿಗಾಗಿ ಇಡೀ ಜಗತ್ತನ್ನು ಜಾಲಾಡಿದರೆ 130 ಕ್ಕಿಂತ ಜಾಸ್ತಿ ಸಿಗಲಾರವು. ಇವು ಬಹಳ ಅಪರೂಪದ ಪ್ರಾಣಿಗಳು. ಇಂಗ್ಲೆಂಡ್‌ ಇವುಗಳ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದೆ. ಇಂಗ್ಲೆಂಡಿನ ಜನ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
ಚಿತ್ರದಲ್ಲಿರುವ ಎರಡು ಬಿಳಿಸಿಂಹಗಳು ಜನವರಿಯಲ್ಲಿ ಜನಿಸಿದವು. ಅವುಗಳಿಗೆ ತಾರಾ ಮತ್ತು ಜಾರಾ ಎಂದು ಹೆಸರಿಸಲಾಯಿತು.



ಇಷ್ಟರಲ್ಲೇ ಇ- ವೇಸ್ಟ್‌ ಲಾ!



ನಮ್ಮ ಕೆಲಸ ಕಿತ್ತುಕೊಳ್ಳಲು ಕಂಪ್ಯೂಟರ್‌ ಬೇಕೆ ಬೇಕು. ಕೆಟ್ಟರೆ ಅದು ಇ- ವೇಸ್ಟ್‌. ಬರೀ ಕಂಪ್ಯೂಟರ್‌ ಮಾತ್ರವಲ್ಲ, ಮೊಬೈಲ್‌: ಇದು ಇದಿಲ್ಲದಿದ್ದರೆ ಜೀವನ ಮುಂದಕ್ಕೇ ಹೋಗುವುದಿಲ್ಲ. ಕರೆನ್ಸಿ ಇಲ್ಲದಿದ್ದರೂ ಪರವಾಗಿಲ್ಲ! ಚೈನಾ ಮೊಬೈಲ್‌ಗಳದ್ದು ಇನ್ನೊಂದು ಕತೆ. ನೋ ರಿಪೇರಿ. ಯೂಸ್‌ ಅಂಡ್‌ ಥ್ರೋ! ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ಮಷೀನು ಇಂತಹ ವಿದ್ಯುತ್‌ ಉಪಕರಣಗಳು ಮಾನವ ಬದುಕಿನ ಒಂದು ಅಂಗವೇ ಆಗಿಬಿಟ್ಟಿವೆ. ಕಡೆಗೆ ಅವು ಇ-ಕಸ. ಇದನ್ನು ಸಾಗ ಹಾಕುವುದಾದರೂ ಎಲ್ಲಿಗೆ? ಇ- ತ್ಯಾಜ್ಯಕ್ಕೆ ತಿಪ್ಪೆಗುಂಡಿ ಎಲ್ಲಿದೆ?
ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಯೇ ಒಂದು ಸವಾಲಾಗಿರುವಾಗ ಮಟ್ರೋ ನಗರಗಳಿಗೆ ಇ- ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ ವರ್ಷಕ್ಕೆ 3.3 ಲಕ್ಷ ಟನ್‌ ಇ- ತ್ಯಾಜ್ಯ ಉತ್ಪತ್ತಿಯಾಗುತ್ತದೆ. 2011ರ ವೇಳಗೆ ಇದರ ಪ್ರಮಾಣ 4.7 ಲಕ್ಷ ಟನ್‌ ಹೆಚ್ಚಾಗುವುದಾಗಿ ಊಹಿಸಲಾಗಿದೆ. ಶೆ. 50ರಷ್ಟು ಇ-ತ್ಯಾಜ್ಯ ಲೆಕ್ಕಕ್ಕೇ ಸಿಗುತ್ತಿಲ್ಲ.
ಇ- ಕಸ ಬಹಳ ಹಾನಿಕಾರಕವಾದುದು. ಪರಿಸರದ ಅಪಾಯಕರ ಪರಿಣಾಮ ಬೀರುತ್ತದೆ. ವಿದ್ಯುತ್‌ ಉಪಕರಣಗಳನ್ನು ಸಂಸ್ಕರಿಸುವ ಕಾರ್ಮಿಕರಿಗೆ ವಿವಿಧ ಬಗೆಯ ವ್ಯಾಧಿಗಳು ಕಾಣಿಸಿಕೊಳ್ಳಲಿವೆ.
ಇ- ತ್ಯಾಜ್ಯಕ್ಕೆ ಕಾನೂನಿಲ್ಲ: ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಗೆ ಕಾನೂನುಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸೆಲ್‌ ಮಾತುಕತೆ ( Bessel convention) ಇದೆ. ಭಾರತದಲ್ಲಿ 1986 ಪರಿಸರ (ಸಂರಕ್ಷಣೆ) ಕಾನೂನಿದೆ. 1989ರ ತ್ಯಾಜ್ಯನಿರ್ವಹಣಾ ನಿಯಮಗಳಿವೆ. ಆದರೆ ಇ- ತ್ಯಾಜ್ಯ ನಿರ್ವಹಣೆಗೆ ಕಾನೂನಿಲ್ಲ. ಇ-ತ್ಯಾಜ್ಯ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಒಂದು ದಶಕದಿಂದೀಚೆಗೆ.
ಇ-ತ್ಯಾಜ್ಯ ಕಾನೂನಿಗೆ ಇದು ಸಕಾಲ: ಬೆಂಗಳೂರಿನಲ್ಲಿ ಸೆ. 25ರಂದು ನಡೆದ `ಪರಿಸರ ಸ್ನೇಹಿ ಇ- ತ್ಯಾಜ್ಯ ನಿರ್ವಹಣೆ ಮಾರ್ಗಸೂಚಿಗಳು' ಎಂಬ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಇ- ತ್ಯಾಜ್ಯ ನಿರ್ವಹಣಗೆ ಜರೂರಾಗಿ ಕಾನೂನಿನ ಅವಶ್ಯಕತೆ ಇದೆ. ಈ ತ್ಯಾಜ್ಯದ ಪರಿಣಾಮ ಪರಿಣಾಮ ಈಗ ಎಲ್ಲರ ಗಮನಕ್ಕೆ ಬರುತ್ತಿದೆ. ಆದ್ದರಿಂದ ಅದರೆ ನಿರ್ವಹಣೆಗೆ ಕಾನೂನು ಜಾರಿಗೊಳಿಸಲು ಇದು ಸಕಾಲ ಎಂಬ ಅಭಿಪ್ರಾಯ ಕೇಳಿಬಂತು.
ಈ ಕಾರ್ಯಗಾರವನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೆಲ ಪರಿಸರ ಎನ್‌ಜಿ ಒಗಳು ಹಾಗೂ ತಯಾರಿಕ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ, ಕಂಪನಿಗಳ, ಎನ್‌ಜಿ ಒಗಳ ತಜ್ಞರುಗಳು ಇ- ತ್ಯಾಜ್ಯದಿಂದ ಉತ್ಪತ್ತಿಯಾಗಿರುವ ಸಮಸ್ಯೆಗಳ ಬಗ್ಗೆ ತಮ್ಮ ವಿಷಯ ಮಂಡಿಸಿದರು. ಎಲ್ಲರೂ ಒಮ್ಮತದಿಂದ ಇ- ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕಾನೂನು ರೂಪಿಸುವುದು ಅಂತಿಮ ಪರಿಹಾರ ಎಂದು ಒಪ್ಪಿಕೊಂಡರು.
ಇ- ತ್ಯಾಜ್ಯ ಸಂಸ್ಕರಣೆಗೆ ವೈಜ್ಞಾನಿಕ ಕ್ರಮ ಅಗತ್ಯವಾಗಿದ್ದು, ವಿದ್ಯುತ್‌ ಉಪಕರಣಗಳ ಬಳಕೆದಾರರು ಮತ್ತು ಗ್ರಾಹಕರು ಎತ್ತೆಚ್ಚುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಉಪಕರಣಗಳ ಬಳಕೆಯ ಮೇಲೆ ಕೆಲ ನಿಷೇಧ ಹಾಗೂ ಹೊಣೆಗಾರಿಕೆಗಳನ್ನು ಹೇರುವ ಪರಿಪೂರ್ಣ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂಬ ತೀರ್ಮಾನ ಕೈಗೊಳ್ಳಲಾಯಿತು.
ನಿರ್ವಹಣಾ ನಿರ್ದೇಶನಗಳು: ಇ- ತ್ಯಾಜ್ಯ ನಿರ್ವಹಣೆಗೆ ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಕೆಲವು ನಿರ್ದೇಶನಗಳನ್ನು ಒಳಗೊಂಡ ಒಂದು ಕಿರು ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ತ್ಯಾಜ್ಯದಿಂದ ಉಂಟಾಗಬಹುದಾದ ಪರಿಣಾಮ ಅವುಗಳ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಇದು ನಿಯಮಗಳ ಆವೃತ್ತಿ ಆಗಿಲ್ಲದ ಕಾರಣ ಇದರಿಂದ ಇ- ತ್ಯಾಜ್ಯ ನಿರ್ವಹಣೆ ಕಷ್ಟ ಆದ್ದರಿಂದ ಕಟ್ಟುನಿಟ್ಟಿನ ಕಾನೂನಿನ ಅವಶ್ಯಕತೆ ಇದೆ.
ರಪ್ತು ರೋಗ: ಇ- ತ್ಯಾಜ್ಯವನ್ನು ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇದು ಬಲುದೊಡ್ಡ ರೋಗ. ಅಕ್ರಮವೂ ಆಗಿದೆ. ಬೆಂಗಳೂರಿನ ಹೊರವಲಯದ ಕೆಲ ಕೆರೆಗಳಲ್ಲಿ ಹೊರ ರಾಜ್ಯಗಳು ತಮ್ಮ ತಮ್ಮ ಇ- ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿರುವುದು ಬೆಳಕಿಗೆ ಬಂದಿದೆ.
ಇದು ಜಾಗತಿಕ ರೋಗವೂ ಹೌದು. ಪಾಶ್ಚಾತ್ಯ ರಾಷ್ಟ್ರಗಳು ಆಫ್ರಿಕನ್‌ ರಾಷ್ಟ್ರಗಳನ್ನು ತಮ್ಮ ತ್ಯಾಜ್ಯ ಬಿಸಾಡುವ ಡಸ್ಟ್‌ಬಿನ್‌ ಅಂದುಕೊಂಡಿವೆ. ಭಾರತವೂ ಕೂಡ ಪಾಶ್ಚಾತ್ಯ ರಾಷ್ಟ್ರಗಳ ಇ-ತ್ಯಾಜ್ಯದ ಒಂದು ಡಸ್ಟ್‌ಬಿನ್‌.
ಈಗೆಲ್ಲಾ ನಗರಗಳು ಎಲೆಕ್ಟ್ರಾನಿಕ್‌ ಸಿಟಿಗಳಾಗುತ್ತಿವೆ. ಗ್ರೀನ್‌ಸಿಟಿ ಯಾರಿಗೂ ಬೇಡ. ಎಲೆಕ್ಟ್ರಾನಿಕ್‌ ಸಿಟಿ ಅಂದಮೇಲೆ ಎಲೆಕ್ಟ್ರಾನಿಕ್‌ ವೇಸ್ಟ್‌ ಇರಲೇಬೇಕು. ವ್ಯಕ್ತಿ ಇದ್ದ ಮೇಲೆ ವ್ಯರ್ಥ ಇರಲ್ವೆ?